ADVERTISEMENT

ವರ್ಗಾವಣೆಗೆ ₹1 ಕೋಟಿ ಲಂಚ ಕೇಳಿದ ಆರೋಪ: ಸಚಿವ ನಾಗೇಶ್‌ ವಿರುದ್ಧ ಪ್ರಧಾನಿಗೆ ದೂರು

ಅಬಕಾರಿ ಸಚಿವ ನಾಗೇಶ್‌ ವಿರುದ್ಧ ಲಂಚ ಆರೋಪ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 15:57 IST
Last Updated 21 ಡಿಸೆಂಬರ್ 2020, 15:57 IST
ಸಚಿವ ಎಚ್‌. ನಾಗೇಶ್‌
ಸಚಿವ ಎಚ್‌. ನಾಗೇಶ್‌    

ಕೋಲಾರ: ಬಳ್ಳಾರಿ ಜಿಲ್ಲೆ ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಮೋಹನ್‌ರಾಜ್‌ರ ವರ್ಗಾವಣೆಗೆ ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರು ಲಂಚ ಕೇಳಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೋಹನ್‌ರಾಜ್‌ರ ಪುತ್ರಿ ಎಂ.ಸ್ನೇಹಾ ಅವರು ಪ್ರಧಾನಿಮಂತ್ರಿ ಕಚೇರಿಗೆ ದೂರು ಕೊಟ್ಟಿದ್ದಾರೆ.

ಸ್ನೇಹಾ ಅವರು ಜುಲೈ 14ರಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, ‘ನನ್ನ ತಂದೆ 30 ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಟೆಕ್‌ ಪದವೀಧರರಾದ ಅವರು ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಂದೆಗೆ ನಾವು ಇಬ್ಬರು ಹೆಣ್ಣು ಮಕ್ಕಳಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದೇವೆ’ ಎಂದು ತಿಳಿಸಿದ್ದಾರೆ.

‘ತಂದೆಯು ಕೋವಿಡ್‌, ಅನಾರೋಗ್ಯ ಮತ್ತು ಕೌಟುಂಬಿಕ ಕಾರಣಕ್ಕೆ ಬೆಂಗಳೂರಿಗೆ ವರ್ಗಾವಣೆ ಕೋರಿದ್ದಾರೆ. ಬೆಂಗಳೂರು ವಿಭಾಗದಲ್ಲಿ ಖಾಲಿಯಿರುವ ಜಂಟಿ ಆಯುಕ್ತರ 5 ಹುದ್ದೆಗೆ ಅರ್ಹ ಅಧಿಕಾರಿಗಳಿಲ್ಲ. ನಿಯಮಬಾಹಿರವಾಗಿ ಕೆಳ ಹಂತದ ಉಪ ಆಯುಕ್ತರ ದರ್ಜೆಯ ಅಧಿಕಾರಿಗಳಿಂದ ಲಂಚ ಪಡೆದು ಅವರಿಗೆ ಹೆಚ್ಚುವರಿಯಾಗಿ ಆ ಹುದ್ದೆಗಳ ಜವಾಬ್ದಾರಿ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ತಂದೆಯ ಸೇವಾವಧಿ 4 ವರ್ಷವಿದ್ದು, ವರ್ಗಾವಣೆಗೆ ₹ 1 ಕೋಟಿ ಲಂಚ ಕೊಡುವಂತೆ ಸಚಿವ ನಾಗೇಶ್‌ ಕೇಳಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ನಾವು ಲಂಚ ಕೊಡುವ ಸ್ಥಿತಿಯಲ್ಲಿಲ್ಲ. ತಂದೆಯು ವರ್ಗಾವಣೆಗೆ ಹಲವು ಬಾರಿ ಮನವಿ ಮಾಡಿದ್ದರೂ ಸಚಿವರು ಸ್ಪಂದಿಸಿಲ್ಲ. ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಬೆಂಗಳೂರಿನ ಸಂಸದರೊಬ್ಬರು ಸಚಿವರ ಜತೆ ಮಾತನಾಡಿದರೂ ಅವರು ಸುಳ್ಳು ಮಾಹಿತಿ ಕೊಟ್ಟು ದಿಕ್ಕು ತಪ್ಪಿಸಿದ್ದಾರೆ’ ಎಂದು ದೂರಿದ್ದಾರೆ.

‘ನಾಗೇಶ್‌ ಅವರು ಲಂಚ ಪಡೆದು ಇಲಾಖೆಯ 600 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಎಲ್‌.ಎ.ಮಂಜುನಾಥ್ ಮತ್ತು ಹರ್ಷ ಎಂಬ ಮದ್ಯವರ್ತಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಲಂಚ ಕೊಡಲು ಸಾಧ್ಯವಾಗದಿದ್ದರೆ ಕಡ್ಡಾಯ ರಜೆ ಪಡೆಯುವಂತೆ ಸಚಿವರು ತಂದೆಗೆ ಕಿರುಕುಳ ನೀಡುತ್ತಿದ್ದಾರೆ. ಅಂತಿಮ ಪ್ರಯತ್ನವಾಗಿ ಈ ಪತ್ರ ಬರೆಯುತ್ತಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಸಂಬಂಧ ಸ್ನೇಹಾ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ. ದೂರಿನ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್‌, ‘ಮೋಹನ್‌ರಾಜ್‌ರ ಪುತ್ರಿ ಆಧಾರರಹಿತವಾಗಿ ಸುಳ್ಳು ಆರೋಪ ಮಾಡಿದ್ದಾರೆ. ಭ್ರಷ್ಟ ಅಧಿಕಾರಿಯಾದ ಮೋಹನ್‌ರಾಜ್‌ ಹಲವು ಬಾರಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದು, ತನಿಖೆ ಮುಂದುವರಿದಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.