ADVERTISEMENT

ಮಾಸ್ಕ್‌ ಧರಿಸದೆ ಓಡಾಟ: ದಂಡ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 15:08 IST
Last Updated 19 ಏಪ್ರಿಲ್ 2021, 15:08 IST
ಕೋಲಾರದ ಎಂ.ಜಿ ರಸ್ತೆಯಲ್ಲಿ ಸೋಮವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು.
ಕೋಲಾರದ ಎಂ.ಜಿ ರಸ್ತೆಯಲ್ಲಿ ಸೋಮವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು.   

ಕೋಲಾರ: ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸೋಮವಾರ ದಿಢೀರ್‌ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಮುಖಗವಸು (ಮಾಸ್ಕ್‌) ಧರಿಸದೆ ಓಡಾಡುತ್ತಿದ್ದ ವಾಹನ ಸವಾರರು, ಪಾದಚಾರಿಗಳು ಹಾಗೂ ಅಂತರ ಕಾಯ್ದುಕೊಳ್ಳದ ಜನರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಸಾಕಷ್ಟು ಮಂದಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಾಸ್ಕ್‌ ಧರಿಸಿದೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದರು.

ಹೀಗಾಗಿ ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳುಚಂಪಕ್ ವೃತ್ತ, ಎಂ.ಜಿ.ರಸ್ತೆ, ಮೆಕ್ಕೆ ವೃತ್ತ, ಕ್ಲಾಕ್‌ಟವರ್‌, ಎಂ.ಬಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಜನರನ್ನು ತಡೆದು ಮಾಸ್ಕ್‌ ಧರಿಸದಿರುವ ಬಗ್ಗೆ ತಪಾಸಣೆ ಮಾಡಿದರು.

ADVERTISEMENT

ಬೈಕ್‌ ಹಾಗೂ ಕಾರುಗಳಲ್ಲಿ ಹೋಗುತ್ತಿದ್ದ ಸಾಕಷ್ಟು ಮಂದಿ ಮಾಸ್ಕ್‌ ಧರಿಸಿರಲಿಲ್ಲ. ಅವರಿಗೆ ಅಧಿಕಾರಿಗಳು ಸ್ಥಳದಲ್ಲೇ ತಲಾ ₹ 100 ದಂಡ ವಿಧಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ನಗರದಲ್ಲಿ ಸೋಮವಾರ ಒಂದೇ ದಿನ 52 ಮಂದಿಯಿಂದ ₹ 5,200 ಸಾವಿರ ದಂಡ ಸಂಗ್ರಹಿಸಲಾಯಿತು.

ಮಾರ್ಗಸೂಚಿ: ‘ಕೊರೊನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿಯನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇವೆ. ಮಾಸ್ಕ್‌ ಧರಿಸಿದವರ ಮತ್ತು ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದವರ ವಿರುದ್ಧದ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್‌ ಸುದ್ದಿಗಾರರಿಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ₹ 500 ಮತ್ತು ಮಾರುಕಟ್ಟೆಗಳಲ್ಲಿ ಅಥವಾ ಅಂಗಡಿಗಳ ಬಳಿ ಅಂತರ ಕಾಯ್ದುಕೊಳ್ಳದಿದ್ದರೆ ₹ 500 ದಂಡ ವಿಧಿಸುತ್ತೇವೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸುರಕ್ಷತಾ ಮಾರ್ಗಸೂಚಿ ರೂಪಿಸಿದ್ದು, ಇದನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಹೇಳಿದರು.

ನಗರಸಭೆ ಕಂದಾಯ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.