ADVERTISEMENT

ಬಂಗಾರಪೇಟೆ: ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮರಕ್ಕೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:56 IST
Last Updated 12 ನವೆಂಬರ್ 2025, 6:56 IST
<div class="paragraphs"><p>ಕೊಂಬೆಗಳನ್ನು ಕುಡಿದು ಮರದ ಸ್ವರೂಪಕ್ಕೆ ಹಾನಿ&nbsp;</p></div>

ಕೊಂಬೆಗಳನ್ನು ಕುಡಿದು ಮರದ ಸ್ವರೂಪಕ್ಕೆ ಹಾನಿ 

   

ಬಂಗಾರಪೇಟೆ: ಅರಣ್ಯ ಇಲಾಖೆ ಅನುಮತಿ ಪಡೆಯದೆ ನಗರದ ಎಪಿಎಂಸಿ ಆವರಣದಲ್ಲಿ ಬೆಳೆದಿರುವ ಬೃಹತ್ ಮರಗಳ ಕೊಂಬೆಗಳನ್ನು ಕಡಿದು ಮಾರಾಟ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರದ ಕೊಂಬೆಗಳನ್ನು ಕಟಾವು ಮಾಡಿಸಿದ್ದಾರೆ.

ADVERTISEMENT

ಈ ಬಗ್ಗೆ ಕೆಲವು ಸಂಘಟನೆಯವರು ಕಾರ್ಯದರ್ಶಿಯನ್ನು ಪ್ರಶ್ನಿಸಿದ್ದಕ್ಕೆ ‌ಎಪಿಎಂಸಿ ಅಧಿಕಾರಿಗಳನ್ನು ಕೇಳಿದಾಗ ಬುಡ ಸಮೇತ ಕಡಿದರೆ ಮಾತ್ರ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಕೊಂಬೆಗಳನ್ನು ಕಡಿಯಲು ಅನುಮತಿ ಅಗತ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

‘ಲಕ್ಷಾಂತರ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ. ಅದಕ್ಕೆ ಹಾನಿಯಾದರೆ ನಾನೇ ಜವಾಬ್ದಾರಿ. ಮರಗಳ ಕೊಂಬೆಗಳಿಂದ ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದೆ. ಹಾಗಾಗಿ ನಾನೇ ಕೊಂಬೆ ಕಡಿಯಲು ಸೂಚಿಸಿದ್ದೇನೆ’ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಸಾರ್ವಜನಿಕರು ಈ ಬಗ್ಗೆ ಅರಣ್ಯ ಇಲಾಖೆ ದೂರು ನೀಡಿದ್ದು, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾರಾಟ ಮಾಡಿದ್ದ ಮರದ ಕೊಂಬೆಗಳ ತುಂಡುಗಳನ್ನು ವಶಕ್ಕೆ ಪಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಪ್ರಕರಣ ದಾಖಲಿಸುವ ಭರವಸೆ

ಸರ್ಕಾರಿ ಸ್ಥಳದಲ್ಲಿರುವ ಯಾವುದೇ ಮರ ಅಥವಾ ಅದರ ಕೊಂಬೆ ಕಡಿಯಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ, ಎಪಿಎಂಸಿ ಆವರಣದಲ್ಲಿ ಅನುಮತಿ ಇಲ್ಲದೆ ಮರದ ಕೊಂಬೆ ಕಡಿಯಲಾಗಿದೆ. ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಹಾಗೂ ಮರ ಕಡಿದವರ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಲಾಗುವುದು.

ಶ್ರೀಲಕ್ಷ್ಮಿ, ವಲಯ ಅರಣ್ಯಾಧಿಕಾರಿ, ಬಂಗಾರಪೇಟೆ

ಹಾನಿಯಾಗದಂತೆ ಕೊಂಬೆ ತೆರವು 
ಮಾರುಕಟ್ಟೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗೋದಾಮಿಗೆ ಬೆಳಕು ಮತ್ತು ಕಡಟ್ಟಕ್ಕೆ ಹಾನಿಯಾಗಿತ್ತು. ವಾಣಿಜ್ಯ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ವರ್ತಕರ ಸಂಘದಿಂದ ದೂರು ಬಂದಿತ್ತು. ಹಾಗಾಗಿ ಮರಕ್ಕೆ ಹಾನಿಯಾಗದಂತೆ ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
ಶ್ರೀನಿವಾಸ್, ಎಂಪಿಎಂಸಿ ಕಾರ್ಯದರ್ಶಿ, ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.