ADVERTISEMENT

ದರೋಡೆಗೆ ರೋಚಕ ತಿರುವು- 5 ದಿನದ ಹಿಂದೆ ಚಿಕ್ಕಕುಂತೂರು ಗೇಟ್‌ ಬಳಿ ನಡೆದಿದ್ದ ಘಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:19 IST
Last Updated 3 ಡಿಸೆಂಬರ್ 2021, 6:19 IST

ಕೋಲಾರ: ಮಾಲೂರು ತಾಲ್ಲೂಕಿನ ಚಿಕ್ಕಕುಂತೂರು ಬಳಿ ಈಚೆಗೆ ನಡೆದಿದ್ದ ದರೋಡೆ ಪ್ರಕರಣವು ಪೊಲೀಸರು ಸೇರಿದಂತೆ ಆರು ಸರ್ಕಾರಿ ನೌಕರರ ಬಂಧನದಿಂದಾಗಿ ರೋಚಕ ತಿರುವು ಪಡೆದುಕೊಂಡಿದೆ.

ಪೊಲೀಸ್ ಸಮವಸ್ತ್ರ ಧರಿಸಿದ್ದಆರೋಪಿಗಳು ಎರಡು ಕಾರುಗಳಲ್ಲಿ ಶಬ್ಬೀರ್‌ ಅವರ ವಾಹನ ಹಿಂಬಾಲಿಸಿದ್ದರು.

ಚಿಕ್ಕಕುಂತೂರು ಗೇಟ್‌ ಬಳಿ ಕಾರು ಅಡ್ಡಗಟ್ಟಿ ತಾವು ಆಂಧ್ರಪ್ರದೇಶದ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಕಾರಿನಲ್ಲಿ ರಕ್ತಚಂದನ ಸಾಗಿಸಲಾಗುತ್ತಿದೆ ಎಂದು ಬೆದರಿಸಿ ವಿಚಾರಣೆಗೆ ಕರೆದೊಯ್ಯುವ ನೆಪದಲ್ಲಿ ಶಬ್ಬೀರ್‌ ಅವರನ್ನು ಎಳೆದೊಯ್ದಿದ್ದರು.

ADVERTISEMENT

ರಾತ್ರಿಯಿಡೀಶಬ್ಬೀರ್‌ ಅವರನ್ನು ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು ಹಲ್ಲೆ ನಡೆಸಿ ಮೊಬೈಲ್‌ ಮತ್ತು ₹1,700 ಹಣ ದೋಚಿದ್ದರು. ಕೋಲಾರ ಹೊರವಲಯದ ಟಮಕ ಬಳಿ ಕಾರಿನಿಂದ ಶಬ್ಬೀರ್‌ ಅವರನ್ನು ತಳ್ಳಿ ವಾಹನ ಸಮೇತ ಪರಾರಿಯಾಗಿದ್ದರು. ಶಬ್ಬೀರ್‌ ಗಲ್‌ಪೇಟೆ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಸರ್ವಿಸ್‌ ಪಿಸ್ತೂಲ್‌ನಿಂದ ಬೆದರಿಕೆ!: ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್‌ ತಮ್ಮ ಸರ್ವಿಸ್‌ ಪಿಸ್ತೂಲ್‌ ತೋರಿಸಿ ಶಬ್ಬೀರ್‌ಗೆ ಬೆದರಿಕೆ ಹಾಕಿದ್ದರು. ಅಲ್ಲದೇ, ಶಬ್ಬೀರ್‌ರ ಸಹೋದರ ಶೇಖ್‌ಉಲ್ಲಾ ಅವರಿಗೆ ಕರೆ ಮಾಡಿ, ರಕ್ತಚಂದನ ಕಳ್ಳ ಸಾಗಣೆ ಪ್ರಕರಣದಲ್ಲಿ ಶಬ್ಬೀರ್‌ ಅವರನ್ನು ಬಂಧಿಸಿದ್ದು, ಹಣ ಕೊಡುವಂತೆ ಬೆದರಿಕೆ ಹಾಕಿದ್ದರು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್‌ಸ್ಪೆಕ್ಟರ್‌ ಪಾತ್ರ?

ರಕ್ತಚಂದನ ಕಳ್ಳಸಾಗಣೆ ಬಗ್ಗೆ ಜಿಲ್ಲೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೆಬಲ್‌ ವೇಣುಗೋಪಾಲ್‌ ಅವರಿಗೆ ಮಾಹಿತಿ ಇತ್ತು. ಇನ್‌ಸ್ಪೆಕ್ಟರ್‌ ಮತ್ತು ವೇಣುಗೋಪಾಲ್‌ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿದು ಲಂಚ ಪಡೆಯಲು ಸಂಚು ರೂಪಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಹೋಗಲಿಲ್ಲ. ಹೀಗಾಗಿ ವೇಣುಗೋಪಾಲ್‌ ಇತರೆ ಆರೋಪಿಗಳ ಜತೆ ಸೇರಿ ದರೋಡೆ ಮಾಡಿದ್ದಾರೆ. ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಪಾತ್ರವಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸೇವೆಯಿಂದ ಅಮಾನತು

ಆರೋಪಿಗಳ ವಿರುದ್ಧ ಅಕ್ರಮವಾಗಿ ಗೃಹ ಬಂಧನ, ಹಲ್ಲೆ, ದರೋಡೆ, ಅಪರಾಧ ಸಂಚು ಆರೋಪ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವೇಣುಗೋಪಾಲ್‌ ಮತ್ತು ಬಸವರಾಜುಅವರನ್ನು ದುರ್ನಡತೆ,ಅಧಿಕಾರ ದುರುಪಯೋಗ ಆರೋಪದಡಿ ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.