ADVERTISEMENT

ಪೊಲೀಸ್‌ ಸೇರಿ ಇಬ್ಬರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 16:45 IST
Last Updated 16 ಜೂನ್ 2020, 16:45 IST

ಕೋಲಾರ: ಜಿಲ್ಲಾ ಕಾರಾಗೃಹದ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಮಂಗಳವಾರ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದೆ.

ಜಿಲ್ಲಾ ಕಾರಾಗೃಹದ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ಬೆಂಗಳೂರಿನ ಪಾದರಾಯನಪುರದ ಕೊರೊನಾ ಸೋಂಕಿತರನ್ನು ಕ್ವಾರಂಟೈನ್‌ ಮಾಡಲಾಗಿದ್ದ ಹಜ್‌ ಭವನದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮೇ ತಿಂಗಳಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಇತ್ತೀಚೆಗೆ ಜಿಲ್ಲೆಗೆ ಹಿಂದಿರುಗಿದ್ದರು.

ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಕುರುಬರಪೇಟೆಯ ಮನೆಯಲ್ಲಿ ಕ್ವಾರಂಟೈನ್‌ ಮಾಡಿದ್ದರು. ಮಂಗಳವಾರ ರಾತ್ರಿ ಇವರ ವೈದ್ಯಕೀಯ ವರದಿ ಬಂದಿದ್ದು, ಸೋಂಕು ತಗುಲಿರುವುದು ಖಚಿತವಾಗಿದೆ.
ಪ್ರಯೋಗಾಲಯದ ವರದಿ ಬರುವ ಮುನ್ನವೇ ಇವರು ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಕಾರಾಗೃಹದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ADVERTISEMENT

ಕಾರ್ಮಿಕನಿಗೆ ಸೋಂಕು: ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಸೋಂಕಿತ ಕಾರ್ಮಿಕನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಮತ್ತೊಬ್ಬ ಕಾರ್ಮಿಕರಿಗೆ ಸೋಂಕು ತಗುಲಿದೆ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ತಾನದ ಕಾರ್ಮಿಕರೊಬ್ಬರಿಗೆ ಸೋಂಕು ಇರುವುದು ಜೂನ್‌ 13ರಂದು ಗೊತ್ತಾಗಿತ್ತು. ಆದರೆ, ಆ ವೇಳೆಗಾಗಲೇ ಕಾರ್ಖಾನೆಯ ಸುಮಾರು 48 ಕಾರ್ಮಿಕರು ಅವರ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಇವರೆಲ್ಲರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಒಬ್ಬ ಕಾರ್ಮಿಕರಿಗೆ ಸೋಂಕು ತಗುಲಿರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.