ADVERTISEMENT

ವಯೋವೃದ್ಧರು–ಅನಾಥ ಮಕ್ಕಳ ಜತೆ ಯುಗಾದಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 13:51 IST
Last Updated 3 ಏಪ್ರಿಲ್ 2022, 13:51 IST
‘ಮುಸ್ಸಂಜೆ ಮನೆ' ವಯೋವೃದ್ಧರ ಹಾಗೂ ಮಕ್ಕಳ ಸೇವಾಶ್ರಮ, ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ನಿರಾಶ್ರಿತರು ಮತ್ತು ಭಿಕ್ಷುಕರೊಂದಿಗೆ ಯುಗಾದಿ ಹಬ್ಬ ಆಚರಿಸಿದ ಜಾಗೃತಿ ಸೇವಾ ಸಂಸ್ಥೆ ಸದಸ್ಯರು ಹೊಸ ಬಟ್ಟೆ ವಿತರಿಸಿದರು
‘ಮುಸ್ಸಂಜೆ ಮನೆ' ವಯೋವೃದ್ಧರ ಹಾಗೂ ಮಕ್ಕಳ ಸೇವಾಶ್ರಮ, ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ನಿರಾಶ್ರಿತರು ಮತ್ತು ಭಿಕ್ಷುಕರೊಂದಿಗೆ ಯುಗಾದಿ ಹಬ್ಬ ಆಚರಿಸಿದ ಜಾಗೃತಿ ಸೇವಾ ಸಂಸ್ಥೆ ಸದಸ್ಯರು ಹೊಸ ಬಟ್ಟೆ ವಿತರಿಸಿದರು   

ಕೋಲಾರ: ಜಾಗೃತಿ ಸೇವಾ ಸಂಸ್ಥೆಯು ‘ಮುಸ್ಸಂಜೆ ಮನೆ' ವಯೋವೃದ್ಧರ ಹಾಗೂ ಮಕ್ಕಳ ಸೇವಾಶ್ರಮ, ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿ ಶನಿವಾರ ಬೀದಿ ಬದಿಯ ನಿರಾಶ್ರಿತರು ಮತ್ತು ಭಿಕ್ಷುಕರೊಂದಿಗೆ ಯುಗಾದಿ ಹಬ್ಬದ ಸಂಭ್ರಮ ಆಚರಿಸಿತು.

ಸಂಸ್ಥೆಯ ಸದಸ್ಯರು ಯುಗಾದಿ ಹಬ್ಬದ ಅಂಗವಾಗಿ ವಯೋವೃದ್ದರು, ಅನಾಥ ಮಕ್ಕಳು, ಭಿಕ್ಷುಕರಿಗೆ ಹೊಸ ಬಟ್ಟೆ ನೀಡಿ, ಸಿಹಿ ಊಟ ಬಡಿಸಿದರು.

‘ಕಳೆದ 12 ವರ್ಷಗಳಿಂದ ವಯೋವೃದ್ಧರು, ಅನಾಥರು, ನಿರಾಶ್ರಿತರು, ದಮನಿತ ಮಹಿಳೆಯರು ಹೀಗೆ ನೊಂದವರ ಪರ ಕೆಲಸ ಮಾಡುತ್ತಾ ಮುಸ್ಸಂಜೆ ಮನೆಯಲ್ಲಿ ಆಶ್ರಯ ನೀಡುತ್ತಾ ಬಂದಿದ್ದೇವೆ’ ಎಂದು ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹೇಳಿದರು.

ADVERTISEMENT

‘ಜಾಗೃತಿ ಸಂಸ್ಥೆಯು ವಯೋವೃದ್ಧರು, ಅನಾಥರೊಂದಿಗೆ ಹಬ್ಬ ಆಚರಣೆ ಮಾಡುವ ಮೂಲಕ ಅವರಿಗೆ ಸಮಾಜದಲ್ಲಿ ಬದುಕುವ ಆತ್ಮಸ್ಥೈರ್ಯ ತುಂಬುತ್ತಿರುವುದು ಒಳ್ಳೆಯ ಕೆಲಸ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮನೆಯಲ್ಲಿ ಹಬ್ಬದ ಸಂಭ್ರಮ ಮುಖ್ಯವಲ್ಲ. ಜತೆಗೆ ವೃದ್ಧರು, ಅನಾಥರೊಂದಿಗೆ ಹಬ್ಬ ಆಚರಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ. ಉಳ್ಳವರು ಇಂತಹವರ ನೆರವಿಗೆ ಬರಬೇಕು’ ಎಂದು ಸಾಯಿ ಮಂದಿರದ ಟ್ರಸ್ಟಿ ಗುಪ್ತಾ ಮನವಿ ಮಾಡಿದರು.

ನಗರಸಭೆ ಮಾಜಿ ಸದಸ್ಯೆ ರತ್ನಮ್ಮ, ಪತಂಜಲಿ ಯೋಗ ಕೇಂದ್ರದ ಗೌರವಾಧ್ಯಕ್ಷ ನಂಜುಂಡಯ್ಯ ಶ್ರೇಷ್ಠಿ, ವಕೀಲ ನಾಗೇಶ್, ಮುಸ್ಸಂಜೆ ಮನೆ ಕಾರ್ಯದರ್ಶಿ ಎ.ಎಸ್.ಶಾಂತಕುಮಾರಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.