ADVERTISEMENT

ಕಾಂಗ್ರೆಸ್‌ನಿಂದ ಶಿಕ್ಷಣ ವ್ಯವಸ್ಥೆ ಹಾಳು: ಸಂಸದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 13:21 IST
Last Updated 27 ಮಾರ್ಚ್ 2022, 13:21 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಕೋಲಾರ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಿಂದ ಕೋಲಾರಕ್ಕೆ ಸೈಕಲ್‌ ಜಾಥಾ ಮೂಲಕ ತ್ರಿವರ್ಣ ಧ್ವಜ ಹೊತ್ತು ತರುವುದರಿಂದ ಕೋಮು ಸೌಹಾರ್ದತೆ ಹಾಳಾಗುತ್ತದೆ ಎಂದು ವಾದಿಸುವವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಗುಡುಗಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂದು ಹಿಜಾಬ್‌ ವಿಚಾರವಾಗಿ ಮಕ್ಕಳ ಶೈಕ್ಷಣಿಕ ಬದುಕಿಗೆ ಕೊಳ್ಳಿಯಿಟ್ಟು ಶಿಕ್ಷಣ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.

‘ರಾಜ್ಯದಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಬೆವರು ಸುರಿಸಿ ದುಡಿದು ಸಾಕಷ್ಟು ಕನಸ್ಸು ಕಟ್ಟಿಕೊಂಡಿರುತ್ತಾರೆ. ಮಕ್ಕಳು ಪೋಷಕರ ಕನಸು ನನಸು ಮಾಡಬೇಕು. ಹಿಜಾಬ್‌ ವಿಚಾರವಾಗಿ ಗೊಂದಲ ಸೃಷ್ಟಿಸುತ್ತಿರುವವರು ಮಕ್ಕಳ ಭವಿಷ್ಯದತ್ತ ಬಗ್ಗೆ ಯೋಚಿಸಬೇಕು’ ಎಂದರು.

ADVERTISEMENT

‘ಈಗ ಮಕ್ಕಳನ್ನು ಪ್ರಚೋದಿಸಿ ಹೋರಾಟಕ್ಕೆ ಕುಮ್ಮಕ್ಕು ನೀಡಿದವರು ಭವಿಷ್ಯದಲ್ಲಿ ಮಕ್ಕಳು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಿದಾಗ ನೆರವಿಗೆ ಬರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳೇ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಯಾರೋ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕುಮ್ಮಕ್ಕು ನೀಡುತ್ತಿರುವುದನ್ನು ಮಕ್ಕಳು ಅರಿಯಬೇಕು’ ಎಂದು ತಿಳಿಸಿದರು.

‘ಹಿಜಾಬ್‌ ವಿಚಾರದಲ್ಲಿ ಹಟಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರಾಗಿ ಭವಿಷ್ಯಕ್ಕೆ ತಾವೇ ಕಲ್ಲು ಹಾಕಿಕೊಳ್ಳಬೇಡಿ. ವಿದ್ಯಾರ್ಥಿಗಳು ಪ್ರಚೋದಿತರಾಗುವುದನ್ನು ಬಿಟ್ಟು ಭವಿಷ್ಯ ಉಜ್ವಲಗೊಳಿಸುವತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.