ADVERTISEMENT

ವೃತ್ತಿ ಕೌಶಲದಿಂದ ನಿರುದ್ಯೋಗ ನಿವಾರಣೆ

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 10:34 IST
Last Updated 24 ಸೆಪ್ಟೆಂಬರ್ 2019, 10:34 IST
ಕೋಲಾರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಲಕರಣೆ ಪೆಟ್ಟಿಗೆ ವಿತರಿಸಿದರು.
ಕೋಲಾರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಲಕರಣೆ ಪೆಟ್ಟಿಗೆ ವಿತರಿಸಿದರು.   

ಕೋಲಾರ: ‘ವೃತ್ತಿ ಕೌಶಲ ಅಭಿವೃದ್ಧಿಯಿಂದ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬಹುದು. ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಅಭಿಪ್ರಾಯಪಟ್ಟರು.

ಜಿಲ್ಲಾ ನಿರ್ಮಿತಿ ಕೇಂದ್ರ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಪ್ರಮಾಣಪತ್ರ ಹಾಗೂ ಸಲಕರಣೆ ಪೆಟ್ಟಿಗೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಈ ಹಿಂದೆ ಉತ್ತಮ ಮಳೆಯಾಗುತ್ತಿದ್ದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಬರುತ್ತಿತ್ತು. ಹೀಗಾಗಿ ಹೆಚ್ಚಿನ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಏಳೆಂಟು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಹೀಗಾಗಿ ರೈತರು ಜೀವನೋಪಾಯಕ್ಕೆ ಬೇರೆ ಕೆಲಸ ಅವಲಂಬಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಕಾರ್ಮಿಕರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸೂಕ್ತ ತರಬೇತಿ ನೀಡಿದರೆ ವೃತ್ತಿಪರರಾಗಿ ಹೊರ ಹೊಮ್ಮುತ್ತಾರೆ. ತರಬೇತಿಯಿಂದ ವೃತ್ತಿ ಕೌಶಲ ವೃದ್ಧಿಯಾಗಿ ಕೆಲಸದಲ್ಲಿ ಹೆಚ್ಚಿನ ಸಂಭಾವನೆ ಪಡೆದು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಕಿವಿಮಾತು ಹೇಳಿದರು.

‘ಜೀವನ ನಿರ್ವಹಣೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುತ್ತಾರೆ. ಪುರುಷರು ದೂರದ ಊರುಗಳಿಗೆ ಹೋಗಿ ಕೆಲಸ ಮಾಡಬಹುದು. ಆದರೆ, ಮಹಿಳೆಯರು ಮನೆಯಲ್ಲಿ ಅಥವಾ ಹತ್ತಿರದ ಸ್ಥಳಗಳಲ್ಲಿ ಕೆಲಸ ಮಾಡಿ ಅದರಿಂದ ಹಣದಲ್ಲಿ ಜೀವನ ಸಾಗಿಸಬೇಕು. ಇಂತಹ ಮಹಿಳೆಯರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲಕಾಲಕ್ಕೆ ತರಬೇತಿ: ‘ಕೇಂದ್ರದ ವತಿಯಿಂದ ಕಾರ್ಮಿಕರಿಗೆ ಕಾಲಕಾಲಕ್ಕೆ ಕೌಶಲ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಗೌರವಧನ ಸಹ ನೀಡಲಾಗುತ್ತಿದೆ. ಅಲ್ಲದೇ, ತರಬೇತಿ ಪೂರ್ಣಗೊಂಡ ಬಳಿಕ ವೃತ್ತಿಗೆ ಸಂಬಂಧಿಸಿದ ಸಲಕರಣೆ ವಿತರಿಸಲಾಗುತ್ತಿದೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ವಿವರಿಸಿದರು.

‘ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳಿಲ್ಲ. ಕೃಷಿಗೆ ನೀರಿನ ಸಮಸ್ಯೆಯಿದೆ. ಹೀಗಾಗಿ ಜನ ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಈ ಕೆಲಸಗಳಿಗೆ ಕೌಶಲದ ಅವಶ್ಯಕತೆಯಿದೆ. ಕಟ್ಟಡ ನಿರ್ಮಾಣವು ಪುರಾತನ ವೃತ್ತಿ. ವೃತ್ತಿ ನೈಪುಣ್ಯತೆ ಇದ್ದವರಿಗೆ ಬೇಡಿಕೆ ಹೆಚ್ಚು. ಹೀಗಾಗಿ ಪುರುಷರ ಜತೆಗೆ ಮಹಿಳಾ ಕಾರ್ಮಿಕರೂ ವೃತ್ತಿ ನೈಪುಣ್ಯತೆ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ತರಬೇತಿ ಪಡೆದ ಕಾರ್ಮಿಕರಿಗೆ ಸಲಕರಣೆಗಳ ಕಿಟ್‌ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ನಿರ್ಮಿತಿ ಕೇಂದ್ರದ ಕಾಮಗಾರಿ ನಿರೀಕ್ಷಕ ಸಿ.ಕೆ.ರವಿಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್, ತಾಲ್ಲೂಕು ಕಾರ್ಮಿಕ ನಿರೀಕ್ಷಕ ದಯಾನಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.