ADVERTISEMENT

ಕೋಲಾರದಲ್ಲಿ ಮಾರಾಟವಾಗುತ್ತಿರುವ ಕೆಲ ಬಾಟಲಿ ನೀರು ಅಸುರಕ್ಷಿತ; ಪರೀಕ್ಷೆಯಲ್ಲಿ ದೃಢ

ಶ್ರೀನಿವಾಸಪುರದ ಎರಡು ಕಡೆ ಈಚೆಗೆ ನಡೆದ ದಾಳಿ ವೇಳೆ ಪತ್ತೆ; ಘಟಕಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್‌

ಕೆ.ಓಂಕಾರ ಮೂರ್ತಿ
Published 16 ಜುಲೈ 2025, 5:57 IST
Last Updated 16 ಜುಲೈ 2025, 5:57 IST
ಘಟಕವೊಂದರ ಬಾಟಲಿ ನೀರು ಪರಿಶೀಲಿಸಿದ ಆಹಾರ ಸುರಕ್ಷತಾ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌
ಘಟಕವೊಂದರ ಬಾಟಲಿ ನೀರು ಪರಿಶೀಲಿಸಿದ ಆಹಾರ ಸುರಕ್ಷತಾ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌    

ಕೋಲಾರ: ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿರುವ ಕೆಲ ಬ್ರ್ಯಾಂಡ್‌ಗಳ ಬಾಟಲಿ ನೀರು ಕುಡಿಯಲು ಯೋಗ್ಯವಾಗಿಲ್ಲ, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ವರದಿಗಳು ಬರುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಜಿಲ್ಲೆ ಕೆಲವೆಡೆ ಬಾಟಲಿ ನೀರಿನ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ಅಂಶ ಪತ್ತೆಯಾಗಿದೆ.

ಎರಡು ಲೀಟರ್‌, ಒಂದು ಲೀಟರ್‌, ಅರ್ಧ ಲೀಟರ್‌ ಬಾಟಲಿಗಳಲ್ಲಿ ಮಾರಾಟ ಮಾಡುತ್ತಿದ್ದು ಹಬ್ಬ, ಮದುವೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಈ ಬಾಟಲಿ ನೀರನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ಕಳಪೆ ಗುಣಮಟ್ಟ ಹಾಗೂ ಅಸುರಕ್ಷಿತ ನೀರು ಕುಡಿದರೆ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಮುಖವಾಗಿ ಶ್ರೀನಿವಾಸಪುರ ಹಾಗೂ ಕೋಲಾರ ತಾಲ್ಲೂಕಿನ ಘಟಕದಲ್ಲಿನ ಬಾಟಲಿ ನೀರನ್ನು ಆಹಾರ ಸುರಕ್ಷತಾ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌ ನೇತೃತ್ವದಲ್ಲಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಗೊತ್ತಾಗಿದೆ. ಈಚೆಗೆ ಶ್ರೀನಿವಾಸಪುರದಲ್ಲಿ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದರು.

‘ಎರಡೂ ಕಡೆ ಬಾಟಲಿ ನೀರಿನ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಕಳಪೆಯಿಂದ ಕೂಡಿರುವುದು ಪತ್ತೆಯಾಗಿದೆ. ಒಂದು ಕಡೆ ನೀರು ಕುಡಿಯಲು ಅಸುರಕ್ಷಿತ ಎಂಬ ವರದಿ ಬಂದರೆ, ಮತ್ತೊಂದು ಕಡೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಪತ್ತೆಯಾಗಿದೆ. ಮೈಸೂರಿನ ಸಿಎಫ್‌ಟಿಆರ್‌ಐಗೆ ಕಳಿಸಿ ಮರುಪರಿಶೀಲನೆ ಮಾಡಿಸುವುದಾಗಿ ಆ ಎರಡೂ ಘಟಕದವರು ನಮಗೆ ಬರೆದುಕೊಟ್ಟಿದ್ದಾರೆ’ ಎಂದು ಡಾ.ರಾಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಟಲಿ ನೀರಿನ ಒಟ್ಟು ನಾಲ್ಕು ಮಾದರಿ ತೆಗೆದಿದ್ದೇವೆ. ಒಂದು ಮಾದರಿಯನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳಿಸಿದೆವು. ಮೂರು ಮಾದರಿಯನ್ನು ನಮ್ಮ ಬಳಿಯೇ ಇಟ್ಟುಕೊಂಡಿದ್ದೇವೆ. ಕಂಪನಿಯವರು ನಮ್ಮ ಪರೀಕ್ಷೆಗೆ ಸವಾಲು ಹಾಕಿ ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷಿಸಬೇಕೆಂದು ಕೋರಿದ್ದಾರೆ. ಹೀಗಾಗಿ, ನಾವು ತೆಗೆದಿರುವ ನೀರಿನ ಮಾದರಿಯನ್ನು ಅವರ ಖರ್ಚಿನಲ್ಲೇ ಸಿಎಫ್‌ಟಿಆರ್‌ಐನಲ್ಲಿರುವ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.

‘ಸಿಎಫ್‌ಟಿಆರ್‌ಐನಲ್ಲೂ ಕಳಪೆ ಗುಣಮಟ್ಟ, ಅಸುರಕ್ಷತೆ ಎಂಬ ವರದಿ ಬಂದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಜಫ್ತಿ ಮಾಡಲು ಕ್ರಮ ವಹಿಸುತ್ತೇವೆ’ ಎಂದರು.

‘ಕೋಲಾರ ತಾಲ್ಲೂಕಿನ ನರಸಪುರದಲ್ಲಿ ಬಾಟಲಿ ನೀರಿನ ಘಟಕವೊಂದು ಮಾನ್ಯತೆ ನವೀಕರಿಸಿಕೊಂಡಿಲ್ಲ. ಅವರ ಮೇಲೂ ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.

ಇನ್ನೂ ಹಲವು ಕಡೆ ಕಳಪೆ ಗುಣಮಟ್ಟದ ಬಾಟಲಿ ನೀರು ಮಾರಾಟ ಮಾಡುತ್ತಿರುವ ಅನುಮಾನವಿದ್ದು, ಸಿಬ್ಬಂದಿ ಕೊರತೆ ಕಾರಣ ವಿಳಂಬವಾಗುತ್ತಿರುವುದು ಗೊತ್ತಾಗಿದೆ.

ಇದಲ್ಲದೆ ಈಚೆಗೆ ಮುಳಬಾಗಿಲು ತಾಲ್ಲೂಕಿನಲ್ಲಿ ನಕಲಿ ಹಾಲು ತಯಾರಿಕೆ ಅಡ್ಡೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು. ಹಾಲು ಪುಡಿ ಮಾಡಿ ಹಾಲು ತಯಾರಿಸುತ್ತಿದ್ದದ್ದು ಪತ್ತೆಯಾಗಿತ್ತು. ಹಾಗೆಯೇ, ಟೊಮೆಟೊ ಸಾಸ್‌, ಡಾಲ್ಡಾ, ಉಪ್ಪು, ಚಹಾ ಪುಡಿ ಕೂಡ ಕಲಬೆರಕೆ, ನಕಲಿ ಆಗಿರುವುದು ಇತ್ತೀಚಿನ ದಾಳಿಗಳಲ್ಲಿ ಪತ್ತೆಯಾಗಿದೆ.

ಘಟಕವೊಂದರ ಬಾಟಲಿ ನೀರು ಪರಿಶೀಲಿಸಿದ ಆಹಾರ ಸುರಕ್ಷತಾ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌
ಬಾಟಲಿ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ಸಂದರ್ಭ
ಇಲಾಖೆ ನಡೆಸಿದ ಪರೀಕ್ಷೆ ವೇಳೆ ಎರಡು ಕಡೆ ಬಾಟಲಿ ನೀರು ಕಳಪೆ ಅಸುರಕ್ಷಿತ ಎಂಬ ವರದಿ ಬಂದಿದೆ. ಸಿಎಫ್‌ಟಿಆರ್‌ಐಗೆ ಮರು ಪರೀಕ್ಷೆಗೆ ಮಾದರಿ ಕಳಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ
ಡಾ.ರಾಕೇಶ್‌ ಜಿಲ್ಲಾ ಅಂಕಿತಾಧಿಕಾರಿ. ಆಹಾರ ಸುರಕ್ಷತಾ ಇಲಾಖೆ

ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವ

ರಾಜ್ಯದ ಕೆಲವೆಡೆ ಬಾಟಲಿಗಳಲ್ಲಿನ ನೀರು ಕಳಪೆ ಗುಣಮಟ್ಟದಿಂದ ಕೂಡಿರುವುದು ನಿಜವೆಂದು ಈಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಒಪ್ಪಿಕೊಂಡಿದ್ದರು. ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದ ನೀರಿನ ಬಾಟಲಿಗಳನ್ನು ಪೂರೈಸುವ ಕಂಪನಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದರು. ಬಾಟಲಿಗಳಲ್ಲಿನ ನೀರಿನ 255 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ 95 ಮಾದರಿಗಳು ಅಸುರಕ್ಷಿತ 88 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ. 72 ಮಾದರಿಗಳು ಮಾತ್ರ ಸುರಕ್ಷಿತ ಆಗಿದ್ದವು ಎಂಬುದಾಗಿ ಹೇಳಿದ್ದರು. ‘ಸ್ಥಳೀಯ ಕಂಪನಿಗಳು ತಯಾರಿಸುವ ಕುಡಿಯುವ ನೀರಿನ ಬಾಟಲಿಗಳಲ್ಲಿನ ನೀರು ಶೇ 99ರಷ್ಟು ಕಳಪೆ ಗುಣಮಟ್ಟದ್ದೆಂದು ಗುರುತಿಸಲಾಗಿದೆ. ಮಾದರಿ ವಿಶ್ಲೇಷಣೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ವಿಶ್ಲೇಷಣೆಗೆ ಒಳಪಡಿಸಿ ಕಳಪೆ ನೀರಿನ ಬಾಟಲಿ ಪೂರೈಸುವ ಕಂಪನಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.