ADVERTISEMENT

ಮುಳಬಾಗಿಲು | ಅಸುರಕ್ಷಿತ ಸ್ಟಾರ್ಟರ್: ಅಪಾಯಕಾರಿ ವಿದ್ಯುತ್‌ ತಂತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 4:49 IST
Last Updated 30 ಆಗಸ್ಟ್ 2025, 4:49 IST
ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಕುಡಿಯುವ ನೀರಿಗಾಗಿ ಕೊರೆಸಿರುವ ಕೊಳವೆಬಾವಿಯ ಸ್ಟಾರ್ಟರ್‌ ಅನ್ನು ಅಸುರಕ್ಷಿತವಾಗಿ ಇರಿಸಿರುವುದು
ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಕುಡಿಯುವ ನೀರಿಗಾಗಿ ಕೊರೆಸಿರುವ ಕೊಳವೆಬಾವಿಯ ಸ್ಟಾರ್ಟರ್‌ ಅನ್ನು ಅಸುರಕ್ಷಿತವಾಗಿ ಇರಿಸಿರುವುದು   

ಮುಳಬಾಗಿಲು: ತಾಲ್ಲೂಕಿನ ನಗವಾರ ಸಮೀಪದ ಕೊತ್ತೂರು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಸ್ಟಾರ್ಟರ್‌ ಅನ್ನು ಅಸುರಕ್ಷಿತವಾಗಿ ಇರಿಸಲಾಗಿದೆ. ವಿದ್ಯುತ್ ತಂತಿಗಳು ನೆಲದ ಮೇಲೆಯೇ ಹಾದು ಹೋಗಿದ್ದು, ಜನ ಮತ್ತು ಜಾನುವಾರುಗಳಿಗೆ ಅಪಾಯ ಎದುರಾಗಿದೆ.

ಮುಷ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ತೂರು ಗ್ರಾಮದ ಹೊರವಲಯದ ಕೆರೆಯ ಬಳಿ ಇರುವ ಕೊಳವೆ ಬಾವಿಯ ಸ್ಟಾರ್ಟರ್‌ ಅನ್ನು ಪ್ಲಾಸ್ಟಿಕ್‌ ಟ್ರೈ ಮೇಲೆ ಇರಿಸಲಾಗಿದೆ. ಪರಿವರ್ತಕ ಇರುವ ಸ್ಥಳದಿಂದ ಸ್ಟಾರ್ಟರ್ ವರೆಗೆ ವಿದ್ಯುತ್ ತಂತಿಯನ್ನು ಎಳೆಯಲಾಗಿದ್ದು, ಅಪಾಯ ಆಹ್ವಾನಿಸುತ್ತಿದೆ. ಬಿಸಿಲು, ಗಾಳಿ–ಮಳೆಗೆ ತಂತಿಗಳ ಮೇಲಿನ ಪ್ಲಾಸ್ಟಿಕ್‌ ಉದಿರು ಹೋಗಿದ್ದು, ಜನ ಮತ್ತು ಜಾನುವಾರುಗಳಿಗೆ ತಂತಿ ತಾಗಿದರೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದೂ, ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅವಘಡ ನಡೆದ ಮೇಲೆ ಎಚ್ಚೆತ್ತುಕೊಳ್ಳುತ್ತಾರೆಯೋ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಳವೆ ಬಾವಿಯ ಸುತ್ತಲೂ ಕಾಲಿಡಲೂ ಆಗದಂತೆ ಗಿಡಗಂಟಿ ಬೆಳೆದು ನಿಂತಿದೆ. ಇದರ ಮಧ್ಯದಲ್ಲಿ ಸ್ಟಾರ್ಟರ್ ಇದೆ. ವಿದ್ಯುತ್‌ ತಂತಿಗಳನ್ನು ಗಿಡಗಂಟಿಗಳ ನಡುವೆಯೇ ಎಳೆಯಲಾಗಿದ್ದು, ತಂತಿಗಳು ಎಲ್ಲಿವೆ ಎಂದು ಹುಡಕಾಟಬೇಕಿದೆ. 

ADVERTISEMENT
ಕೈಗೆಟ್ಟುಕುವಂತಿರುವ ವಿದ್ಯುತ್‌ ತಂತಿ. ಇದರ ಸುತ್ತಲೂ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳು

ವಿದ್ಯುತ್‌ ತಂತಿಗಳನ್ನು ಮೇಲಕ್ಕೆ ಕಟ್ಟಿ ಸ್ಟಾರ್ಟರ್ ಅನ್ನು ಸುರಕ್ಷಿತವಾಗಿ ಇಡುವಂತೆ ಸ್ಥಳೀಯ ಪ್ರತಿನಿಧಿ ಸನಾಉಲ್ಲಾ ಅವರಿಗೆ ತಿಳಿಸಲಾಗಿತ್ತು. ಆದರೂ ಕೆಲಸ ಮಾಡಿಲ್ಲ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು

- ಸಂತೋಷ್ ಕುಂಬಾರ ಪಿಡಿಒ ಮುಷ್ಟೂರು ಗ್ರಾ.ಪಂ.

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ

ಸುಮಾರು ನಾಲ್ಕೈದು ವರ್ಷದಿಂದ ವಿದ್ಯುತ್ ತಂತಿಗಳು ತಲೆಗೆ ತಾಗುವಂತೆ ಇದೆ. ನಾಲ್ಕು ತಿಂಗಳ ಹಿಂದೆ ಪಿಡಿಒ ಸಂತೋಷ್ ಕುಂಬಾರ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಸಮಸ್ಯೆ ತಿಳಿಸಿದರೆ ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದರು. ಆದರೆ ನಾಲ್ಕು ತಿಂಗಳೇ ಕಳೆದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು. ಸಾವು–ನೋವು ಕಟ್ಟಿಟ್ಟ ಬುತ್ತಿ ತಂತಿಯನ್ನು ಅಲ್ಲಲ್ಲಿ ಡ್ರಿಪ್ ಕೇಬಲ್‌ಗಳಿಂದ ಎಳೆದು ಒಣಗಿದ ಟೊಮೆಟೊ ಕಡ್ಡಿಗಳಿಗೆ ಕಟ್ಟಲಾಗಿದ್ದು ಟೊಮೆಟೊ ಕಡ್ಡಿಗಳು ತಂತಿಗಳ ಭಾರಕ್ಕೆ ಮುರಿದು ಹಾಳಾಗಿವೆ. ತಂತಿಗಳ ಮೇಲಿನ ಪ್ಲಾಸ್ಟಿಕ್ ಬಿಸಿಲಿಗೆ ಒಣಗಿ ತಂತಿಗಳ ಒಳಗಿನ ಕಂಬಿ ತೆರೆದುಕೊಂಡಿವೆ. ಯಾರಾದರೂ ಮುಟ್ಟಿದ್ದರೆ ಸಾವು –ನೋವುಗಳು ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.