
ಕೋಲಾರ: ನಗರದ ವಿವಿಧ ಸ್ಥಳಗಳಿಗೆ ಗುರುವಾರ ಬೆಳ್ಳಂಬೆಳಿಗ್ಗೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ, ಅವ್ಯವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸರ್ಕಾರಿ ಹಾಸ್ಟೆಲ್, ಶುದ್ಧ ನೀರಿನ ಘಟಕ, ಕೋಲಾರಮ್ಮ ಕೆರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕಾಯುಕ್ತ ಅಧಿಕಾರಿಗಳು ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಪರಿಶೀಲಿಸಿದಾಗ ವಿದ್ಯಾರ್ಥಿಗಳ ಕೊಠಡಿಯೊಂದರಲ್ಲಿ ಸಿಗರೇಟ್ ಪೊಟ್ಟಣ ಪತ್ತೆಯಾಯಿತು. ಆಗ ವಾರ್ಡನನ್ನು ತರಾಟೆಗೆ ತೆಗೆದುಕೊಂಡು, ‘ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ, ನೋಡಿಕೊಂಡು ಇದ್ದೀಯಾ? ಇಲ್ಲಿಗೆ ಇದು ನಿಲ್ಲಿಸಬೇಕು’ ಎಂದು ತಾಕೀತು ಮಾಡಿದರು.
ವಿದ್ಯಾರ್ಥಿಗಳು ಕೂಡ ದೂರು ನೀಡಿದರು. ಸ್ವಚ್ಛತೆ ಇಲ್ಲದೆ ಇರುವುದು, ಆಹಾರ ರುಚಿಯಿಲ್ಲದೆ ಇರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರು.
ಬಸ್ ನಿಲ್ದಾಣದಲ್ಲಿ ಸಿಂಟೆಕ್ಸ್ ಟ್ಯಾಂಕ್ ಇರಿಸಲಾಗಿದ್ದು, ಅದನ್ನು ಸ್ವಚ್ಛಗೊಳಿಸದೆ ಇರುವುದು ಕಂಡು ಬಂದಿತು. ಇನ್ನು ದ್ವಿಚಕ್ರವಾಹನ ಪಾರ್ಕಿಂಗ್ ದರಪಟ್ಟಿಯ ಮಾಹಿತಿ ಪಡೆದುಕೊಂಡರು.
ದಿಢೀರ್ ಭೇಟಿಯ ವೇಳೆ ನಗರದಲ್ಲಿನ ಖಾಲಿ ನಿವೇಶನಗಳಲ್ಲಿ ಕಸದ ರಾಶಿಯನ್ನು ಕಂಡು ಕೂಡಲೇ ಸ್ವಚ್ಛಗೊಳಿಸಬೇಕು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ತಮ್ಮ ಕೈಯಲ್ಲಿ ಆಗದಿದ್ದರೆ ನಾವು ತೆರವು ಮಾಡಿಸುತ್ತೇವೆ, ಶುಲ್ಕ ಪಾವತಿಸಿ ಎಂದು ವೀರಪ್ಪ, ನಗರಸಭೆಯ ಅಧಿಕಾರಿಗಳಿಗೆ ಹೇಳಿದರು.
ಇದಕ್ಕೆ ಪೌರಾಯುಕ್ತ ನವೀನ್ ಚಂದ್ರ ಪ್ರತಿಕ್ರಿಯಿಸಿ, ‘ನಗರದ ಸೌಂದರ್ಯ ಕಾಪಾಡಲು ಆದ್ಯತೆ ನೀಡಲಾಗಿದೆ. ಸುಮಾರು ವರ್ಷಗಳಿಂದ ಹಾಗೆಯೇ ಬಿಡಲಾಗಿದ್ದ ಕಸವನ್ನು ತೆರವು ಮಾಡಲಾಗಿದೆ. ಸಂಬಂಧಪಟ್ಟ ನಿವೇಶನ ಮಾಲೀಕರಿಗೆ ನೊಟೀಸ್ ಜಾರಿ ಮಾಡಿ ತೆರವುಗೊಳಿಸಲಾಗುವುದು’ ಎಂದರು.
ಎಸ್ಪಿ, ಎಸಿ, ನ್ಯಾಯಾಧೀಶರು, ಅಧಿಕಾರಿಗಳ ಮನೆಗಳ ಮುಂದೆಯೇ ಸ್ವಚ್ಛತೆ ಇಲ್ಲ. ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್, ಬಾರ್, ಹೋಟೆಲ್‌ಗಳ ತ್ಯಾಜ್ಯ ಹೆಚ್ಚಾಗಿ ಬಿದ್ದಿದೆ. ಟಾಕೀಸ್‌ನವರು ಪೋಸ್ಟರ್‌ಗಳನ್ನು ಗೋಡೆಗಳ ಮೇಲೆ ಅಂಟಿಸಿ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅವರ ಮೇಲೆ ದೂರು ದಾಖಲಿಸಿ ಕ್ರಮಕೈಗೊಳ್ಳಿ ಎಂದು ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಗಣಿ ಅಧಿಕಾರಿಗಳನ್ನು ಅರೆಸ್ಟ್ ಮಾಡಿ!
ಗಣಿ ಇಲಾಖೆ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ವೇಳೆಗೆ ಇಲಾಖೆಯ ಉಪನಿರ್ದೇಶಕ ಕೊದಂಡರಾಮಸ್ವಾಮಿ ಅಧಿಕಾರಿ ವಿಶ್ವನಾಥ್ ಗೈರಾಗಿದ್ದರು. ಇದಕ್ಕೆ ಗರಂ ಆದ ಉಪಲೋಕಾಯುಕ್ತ ವೀರಪ್ಪ ‘ಅವರೇನು ಕಚೇರಿಯಲ್ಲಿ ನ್ಯಾಯ ಮಾಡಲು ಹೋಗಿಲ್ಲ ವ್ಯವಹಾರ ವಸೂಲಿ ಮಾಡುತ್ತಿರುತ್ತಾರೆ. ಪ್ರಕರಣ ವಿಚಾರಣೆ ಸಂಬಂಧ ಪೂರ್ವ ನೊಟೀಸ್ ನೀಡಿಯೂ ಬಂದಿಲ್ಲ ಅವರಿಗೆ ವಾರೆಂಟ್ ನೀಡಿ. ಅರೆಸ್ಟ್ ಮಾಡಿಕೊಂಡು ಬನ್ನಿ’ ಎಂದು ಸೂಚಿಸಿದರು. ಆಗ ಕೆಲ ಅಧಿಕಾರಿಗಳು ಓಡೋಡಿ ಬಂದರು.
227 ಪ್ರಕರಣಗಳ ವಿಚಾರಣೆ
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಎರಡನೆ ದಿನ ಗುರುವಾರವೂ ನಡೆಯಿತು. ಒಟ್ಟು 227 ಪ್ರಕರಣಗಳ ವಿಚಾರಣೆಯನ್ನು ವೀರಪ್ಪ ನಡೆಸಿದರು. ಕೆರೆ ಕಾಲುವೆ ದಾರಿ ಜಾಗ ಒತ್ತುವರಿ ಖಾತೆ ತಿದ್ದುಪಡಿ ಪೋಡಿ ಸಂಬಂಧಪಟ್ಟಂತೆ ಹೆಚ್ಚು ದೂರುಗಳಿದ್ದವು. ಜಿ.ಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಎಸ್ಪಿ ನಿಖಿಲ್ ಬಿ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಉಪವಿಭಾಗಾಧಿಕಾರಿ ಡಾ.ಮೈತ್ರಿ ಲೋಕಾಯುಕ್ತ ಸಂಸ್ಥೆಯ ಅರವಿಂದ್ ಲೋಕಾಯುಕ್ತ ಜಿಲ್ಲಾ ಎಸ್ಪಿ ಅಂಥೋಣಿ ಜಾನ್ ಇನ್‌ಸ್ಪೆಕ್ಟರ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.