ADVERTISEMENT

ಸ್ವಹಿತಕ್ಕೆ ಜಾತಿ ಬಳಕೆ ದುರಂತ: ಸಚಿವ ಅಶೋಕ್‌

ಆರ್ಯವೈಶ್ಯ ಮಹಾಸಭಾದ ಪ್ರತಿಭೋತ್ಸವ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 14:02 IST
Last Updated 22 ಸೆಪ್ಟೆಂಬರ್ 2019, 14:02 IST
ರಾಜ್ಯ ಆರ್ಯವೈಶ್ಯ ಮಹಾಸಭಾ ಕೋಲಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದಲ್ಲಿ ಸಮುದಾಯದ ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯ ಆರ್ಯವೈಶ್ಯ ಮಹಾಸಭಾ ಕೋಲಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದಲ್ಲಿ ಸಮುದಾಯದ ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.   

ಕೋಲಾರ: ‘ದೇಶದಲ್ಲಿ ಜಾತೀಯತೆಯ ವಿಷ ವರ್ತುಲ ಪ್ರಬಲಗೊಳ್ಳುತ್ತಿದೆ. ಸ್ವಹಿತಕ್ಕೆ ಜಾತಿ ಬಳಸಿಕೊಳ್ಳುವುದು ದುರಂತ’ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ರಾಜ್ಯ ಆರ್ಯವೈಶ್ಯ ಮಹಾಸಭಾ ವತಿಯಿಂದ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದಲ್ಲಿ ಮಾತನಾಡಿ, ‘ದೇಶದ ಅಭಿವೃದ್ಧಿಗೆ ಪೂರಕವಾಗಿ ಜಾತಿಗಳು ಬೆಳೆಯಬೇಕೆ ಹೊರತು ಮತ್ತೊಂದು ಜಾತಿಯ ವಿರುದ್ಧ ಎತ್ತಿ ಕಟ್ಟಬಾರದು’ ಎಂದು ಕಿವಿಮಾತು ಹೇಳಿದರು.

‘ಜಾತಿ ವ್ಯವಸ್ಥೆ ದೊಡ್ಡ ಸಾಮಾಜಿಕ ಪಿಡುಗಲ್ಲ. ದೇಶದಲ್ಲಿ ಜಾತಿ ನಿರ್ಮೂಲನೆ ಬಗ್ಗೆ ಭಾಷಣ ಮಾಡಿದಷ್ಟು ಜಾತೀಯತೆ ಬಲಿಷ್ಠವಾಗುತ್ತಿದೆ. ಇದಕ್ಕೆ ಪ್ರಚೋದನೆ ನೀಡಬಾರದು. ಜಾತಿ, ಸಮುದಾಯಗಳು ಹೂವು ಇದ್ದಂತೆ. ಇವು ದೇಶವನ್ನು ಬೆಳೆಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ ಅನುಕೂಲಕ್ಕೆ ಪ್ರಧಾನಿ ಮೋದಿ ಕಲ್ಪಿಸಿರುವ ಶೇ 10ರ ಮೀಸಲಾತಿ ರಾಜ್ಯದಲ್ಲೂ ಜಾರಿಯಾಗಬೇಕು’ ಎಂದರು.

ADVERTISEMENT

‘ಆರ್ಯವೈಶ್ಯರು ಸಮಾಜಮುಖಿಯಾಗಿ ಕೆಲಸ ಮಾಡುವ ಸಮುದಾಯ. ಸಮುದಾಯದ ಮುಖಂಡರು ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ 50 ಎಕರೆ ಜಮೀನು ಕೇಳಿದ್ದಾರೆ. ಆದರೆ, ಒಂದೇ ಕಡೆ ಜಮೀನು ಸಿಗುವುದು ಕಷ್ಟ. ಕಂದಾಯ ಸಚಿವನಾಗಿ ಜಾಗ ನೀಡುವುದು ನನ್ನ ಜವಾಬ್ದಾರಿ. ಮಹಾಸಭಾದಿಂದ ನಿಯೋಗ ಬನ್ನಿ, ಸೂಕ್ತ ಕಡೆ ಸಾಧ್ಯವಾದಷ್ಟು ಜಮೀನು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಕ್ರೀಡೆಯಲ್ಲಿ ಗೆದ್ದವರು ಖುಷಿಯಲ್ಲಿ ಮೈ ಮರೆಯುತ್ತಾರೆ. ಆದರೆ, ಸೋತವನಿಗೆ ಗೆಲ್ಲುವ ಛಲ ಬರುತ್ತದೆ. ವಿದ್ಯೆ ಯಾರ ಸ್ವತ್ತಲ್ಲ. ಕೋಟಿಗಟ್ಟಲೇ ಹಣವಿದ್ದರೂ ಸರಸ್ವತಿ ಹತ್ತಿರಕ್ಕೂ ಬರುವುದಿಲ್ಲ. ಬದಲಿಗೆ ಶ್ರೀಮಂತರ ಮನೆ ಬಳಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರುತ್ತಾರೆ’ ಎಂದು ಚಟಾಕಿ ಹಾರಿಸಿದರು.

‘ವಿದ್ಯಾರ್ಥಿಗಳಲ್ಲಿ ತಾರತಮ್ಯ ಬೇಡ. ಹೂವು ಹಾರ ಹಾಕಿ ಸನ್ಮಾನಿಸಿದರೆಂದರೆ ಈ ನೆಲದ, ಸಮಾಜದ ಋಣವಿದೆ ಎಂದರ್ಥ. ಸನ್ಮಾನಿತರು ಸಮಾಜದ ಋಣ ತೀರಿಸಬೇಕು. ಮಕ್ಕಳು ಪೋಷಕರು ಹಾಗೂ ಶಿಕ್ಷಕರಿಗೆ ವಿಧೇಯರಾಗಿರಬೇಕು’ ಎಂದು ಸಲಹೆ ನೀಡಿದರು.

ಐತಿಹಾಸಿಕ ನಿರ್ಣಯ: ‘ಸ್ವಚ್ಛ ಭಾರತ ಅಭಿಯಾನ ಹಾಗೂ ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯದ ಜನಸಂಖ್ಯೆ 6 ಕೋಟಿಯಿದೆ. ಇದರಲ್ಲಿ 5.50 ಲಕ್ಷ ಜನಸಂಖ್ಯೆ ಹೊಂದಿರುವ ಆರ್ಯವೈಶ್ಯ ಸಮಾಜವು ಚಿಕ್ಕ ಸಮುದಾಯವಾಗಿದೆ. ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ. ಆರ್ಯವೈಶ್ಯ ಮಹಾಸಭಾವು ಸಮುದಾಯದ ಏಳಿಗೆಗೆ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

ಶಿಕ್ಷಣಕ್ಕೆ ಒತ್ತು ಕೊಡಿ: ‘ಎಲ್ಲಾ ಸಮಾಜಗಳು ಶೈಕ್ಷಣಿಕವಾಗಿ ಮುಂದೆ ಬಂದರಷ್ಟೇ ದೇಶದ ಏಳಿಗೆ ಸಾಧ್ಯ. ಯಾವುದೇ ಮೋಸ ಇಲ್ಲದಂತೆ ವ್ಯಾಪಾರ ನಡೆಸುತ್ತಿರುವ ಆರ್ಯವೈಶ್ಯ ಸಮುದಾಯವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಸಮುದಾಯದ 1,085 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಪ್ರತಿಭೋತ್ಸವ ಸಮಿತಿ ಅಧ್ಯಕ್ಷ ಕೆ.ವಿ.ರಾಮ್‌ಪ್ರಸಾದ್‌, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್, ಕಾರ್ಯದರ್ಶಿ ಎನ್.ಸಿ.ಸತೀಶ್, ಸದಸ್ಯರಾದ ಬಿ.ಎಲ್.ವೆಂಕಟೇಶ್, ಎಂ.ಆರ್.ಆನಂದ್, ಬಿ.ರಮೇಶಮೂರ್ತಿ, ರಾಜ್ಯ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ್, ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.