ADVERTISEMENT

ಮುಗಿಯುವ ಸಂಪನ್ಮೂಲ ಮಿತವಾಗಿ ಬಳಸಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 17:30 IST
Last Updated 27 ಜನವರಿ 2020, 17:30 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ‘ಇಂಧನ ಉಳಿಸಿ ಪರಿಸರ ಸಂರಕ್ಷಿಸಿ’ ಕುರಿತ ಜಾಗೃತಿ ಜಾಥಾಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರಾಟ ವಿಭಾಗದ ಅಧಿಕಾರಿ ಎಲಿಜಿಬತ್ ಅಂಜುಂ ಚಾಲನೆ ನೀಡಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ‘ಇಂಧನ ಉಳಿಸಿ ಪರಿಸರ ಸಂರಕ್ಷಿಸಿ’ ಕುರಿತ ಜಾಗೃತಿ ಜಾಥಾಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರಾಟ ವಿಭಾಗದ ಅಧಿಕಾರಿ ಎಲಿಜಿಬತ್ ಅಂಜುಂ ಚಾಲನೆ ನೀಡಿದರು.   

ಕೋಲಾರ: ‘ಅಡುಗೆ ಅನಿಲ ಬಳಕೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ, ಮಿತ ಬಳಕೆಗೆ ವಿದ್ಯಾರ್ಥಿಗಳಿಗೆ ಪೋಷಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರಾಟ ವಿಭಾಗದ ಅಧಿಕಾರಿ ಎಲಿಜಿಬತ್ ಅಂಜುಂ ಸಲಹೆ ನೀಡಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಸಾಕ್ಷಮ್ ಭಾರತ್-2020 ಅಡಿ ನಡೆದ ‘ಇಂಧನ ಉಳಿಸಿ ಪರಿಸರ ಸಂರಕ್ಷಿಸಿ’ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ‘ಪರಿಸರ ಸಂರಕ್ಷಣೆಯಲ್ಲಿ ಅಡುಗೆ ಅನಿಲ ಬಳಕೆ ಆಂದೋಲನವಾಗಿ ಬೆಳೆದಿದೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು’ ಎಂದು ಹೇಳಿದರು.

‘ಈಗಾಗಲೇ ಜಿಲ್ಲೆಯು ಸೀಮೆಎಣ್ಣೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿರುವುದು ಹೆಮ್ಮೆಯ ವಿಷಯ. ಭೂಮಿಯ ಮೇಲೆ ಮುಗಿದು ಹೋಗುವ ಸಂಪನ್ಮೂಲ ಇಂಧನದವನ್ನು ಅನಾವಶ್ಯಕ ಬಳಕೆಯಿಂದ ಪರಿಸರ ನಾಶದ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಅಡುಗೆ ಅನಿಲ ಜತೆಗೆ ಪೆಟ್ರೋಲ್, ಡಿಸೇಲ್, ವಿದ್ಯುತ್ ಸಹಾ ಇಂಧನವೇ ಆಗಿದ್ದು, ಅಡುಗೆ ಅನಿಲ ಮಿತ ಬಳಕೆಗೆ ಕುಕ್ಕರ್ ಬಳಕೆ ಮಾಡಬಹುದು. ಅನಾವಶ್ಯಕವಾಗಿ ಒಲೆ ಉರಿಸುವುದನ್ನು ತಡೆದು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಕೆ ಮಾಡಿ’ ಎಂದರು.

ಸ್ವಾಮಿ ಬಾಲಾಜಿ ಗ್ಯಾಸ್ ಏಜೆನ್ಸೀಸ್‌ ಮಾಲೀಕ ಅನಂತಕುಮಾರ್ ಮಾತನಾಡಿ, ‘ಅಡುಗೆ ಅನಿಲ ಬಳಕೆ ಮಾಡುವಾಗ ಸುರಕ್ಷಿತ ಕ್ರಮಗಳನ್ನು ಸರಿಸಿ, ಸಂಭವಿಸುವ ಅನಾಹುತಗಳನ್ನು ತಡೆಯಬೇಕು’ ಎಂದು ಹೇಳಿದರು.

ಅಡುಗೆ ಅನಿಲ ಸರಬರಾಜುದಾರ ಜಯರಾಮೇಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಗ್ರಾಮೀಣ ಜನ ಮುಂದಾಗಬೇಕು’ ಎಂದು ತಿಳಿಸಿದರು.

ಜಾಥಾದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರಿಗೆ ಕರಪತ್ರ ವಿತರಿಸಿದರು.

ವಿವಿಧ ಏಜೆನ್ಸಿಸ್ ಮಾಲೀಕರಾದ ರಾಹುಲ್, ವಿನೋದ್‌ಕುಮಾರ್, ಶ್ರೀಧರ್, ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಪ್ರೇರಕ ರಾಮಚಂದ್ರಪ್ಪ, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಭವಾನಿ, ಶ್ರೀನಿವಾಸಲು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.