ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸ್ಥಾಪಿಸಿರುವ ‘ಉತ್ತರೋತ್ತರ ಪ್ರಶಸ್ತಿ’ಗೆ ಈ ಬಾರಿ ಕವಿ ಬಿ.ಆರ್.ಲಕ್ಷ್ಮಣರಾವ್ (ಚಿಂತಾಮಣಿ), ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ (ಬೆಂಗಳೂರು), ತೊಗಲು ಗೊಂಬೆ ಪ್ರದರ್ಶನ ಕಲಾವಿದೆ ಸುಮಲತಾ (ಚಿಂತಾಮಣಿ) ಹಾಗೂ ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ (ಶ್ರೀನಿವಾಸಪುರ) ಅವರನ್ನು ಆಯ್ಕೆ ಮಾಡಲಾಗಿದೆ.
‘2013ರಿಂದ ಈ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮೂರನೇ ವಾರ್ಷಿಕ ಪ್ರಶಸ್ತಿಗೆ ದಂಪತಿ ಸೇರಿ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸೆ.20ರಂದು ಬೆಳಿಗ್ಗೆ 11.30ಕ್ಕೆ ಕೋಲಾರ ತಾಲ್ಲೂಕಿನ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿರುವ ದಿನಾಚರಣೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 10 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿರಲಿದೆ’ ಎಂದು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದ್ದಾರೆ.
ಸಾಹಿತಿ ಜಯಂತ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರೊ.ವಾನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.