
ಕೋಲಾರ: ಬೆಂಗಳುರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪರೀಕ್ಷೆಗಳನ್ನು ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಬೇಕು. ನಕಲು ಮಾಡಲು ಬಿಡಬಾರದು. ಪರೀಕ್ಷಾ ಪಾವಿತ್ರ್ಯ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಬಿ.ಕೆ.ರವಿ ಸೂಚನೆ ನೀಡಿದರು.
ಸ್ನಾತಕ ಪದವಿ ಪರೀಕ್ಷೆಗಳ ಕೇಂದ್ರಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ನಂತರ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸುವ ನಗರದ ಬಾಲಕರ ಕಾಲೇಜಿನ ಗೋದಾಮಿಗೂ ತೆರಳಿ ವೀಕ್ಷಿಸಿದರು.
ಉತ್ತರ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶ ನೀಡಬಾರದು. ಘನತೆಗೆ ಧಕ್ಕೆ ಬರುವ ಕೆಲಸವಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು. ಪರೀಕ್ಷೆ, ಮೌಲ್ಯಮಾಪನದ ಪಾವಿತ್ರ್ಯಕ್ಕೂ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧ್ಯಾಪಕರು, ಪ್ರಾಂಶುಪಾಲರಿಗೆ ಸಲಹೆ ನೀಡಿದರು.
ಅಕಾಡೆಮಿಕ್ ಕಾರ್ಯಕ್ರಮಗಳು, ಪರೀಕ್ಷಾ ವೇಳಾಪಟ್ಟಿ ಮತ್ತು ಆಡಳಿತಾತ್ಮಕ ಆದ್ಯತೆಗಳು ಲೋಪವಾಗದಂತಿರಲಿ. ಪಾರದರ್ಶಕತೆ, ಅಕಾಡೆಮಿಕ್ ಸ್ವಾಯತ್ತತೆ ಮತ್ತು ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳಿಗೆ ಗಮನ ಹರಿಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಕುಲಪತಿ ಜೊತೆ ಮೌಲ್ಯಮಾಪನ ಕುಲಸಚಿವ ಪ್ರೊ.ಲೋಕನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.