ವೇಮಗಲ್: ವೇಮಗಲ್ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಪಟ್ಟಣದ ಅಭಿವೃದ್ಧಿ ಹಾಗೂ ಅಂದದ ದೃಷ್ಟಿಯಿಂದ ಅನೇಕ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ. ಆದರೆ ವೇಮಗಲ್‌ನ ಅಂದಕ್ಕೆ ಕುಂದು ತರುತ್ತಿರುವ ನಿರುಪಯುಕ್ತ ಕಿರು ನೀರಿನ ಟ್ಯಾಂಕ್‌ಗಳು ಮಾತ್ರ ದಾರಿಯ ಮಧ್ಯಮಧ್ಯ ಹಾಗೇ ನಿಂತಿವೆ.
ವೇಮಗಲ್ ಗ್ರಾಮ ಪಂಚಾಯಿತಿಯಾಗಿದ್ದ ಸಂದರ್ಭದಲ್ಲಿ ಮನೆಮನೆಗೂ ನಳದ ಸಂಪರ್ಕವನ್ನು ಕಲ್ಪಿಸಿರಿರಲಿಲ್ಲ, ಹೀಗಾಗಿ ಎರಡು ಬೀದಿಗೆ ಒಂದರಂತೆ ಕಿರು ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಇದಕ್ಕೆ ಪೈಪ್ ಸಂಪರ್ಕ ಕಲ್ಪಿಸಿ ನಲ್ಲಿಗಳನ್ನು ಜೋಡಿಸಿ ನೀರು ಪೂರೈಸಲಾಗುತ್ತಿತ್ತು. ಜನ ಇದರಲ್ಲಿನ ನೀರನ್ನೇ ಅವಲಂಭಿಸಿದ್ದರು.
ಆದರೆ ಈಗ ಟ್ಯಾಂಕಿನಿಂದ ಪ್ರತಿ ಮನೆಗೆ ನೀರಿನ ಕೊಳಾಯಿ ಹಾಗೂ ಬೀದಿ ಕೊಳವೆಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮಿನಿ ಟ್ಯಾಂಗ್‌ಗಳು ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ. ಈ ಟ್ಯಾಂಕ್‌ಗಳಿಗೆ ಈಗ ನೀರು ಸರಬರಾಜು ಕೂಡ ಮಾಡುತ್ತಿಲ್ಲ. ಯಾರೂ ಕೂಡ ಈ ಟ್ಯಾಂಕ್‌ಗಳ ನೀರನ್ನು ಬಳಸುತ್ತಿಲ್ಲ. ಆದ್ದರಿಂದ ಇವುಗಳನ್ನೆಲ್ಲ ತೆರುಗುಗೊಳಿಸಿದರೆ ಪಟ್ಟಣದ ಅಂದ ಹೆಚ್ಚುತ್ತದೆ ಎನ್ನುವುದು ಸ್ಥಳೀಯರ ವಾದ.
ಪಟ್ಟಣದ ಚಿಕ್ಕ ಚಿಕ್ಕ ರಸ್ತೆಗಳ ಪಕ್ಕದಲ್ಲಿಯೇ ಕಿರು ಟ್ಯಾಂಕ್‌ಗಳನ್ನು ನಿರ್ಮಾಣಮಾಡಿರುವುದರಿಂದ ರಸ್ತೆಗಳು ಇಕ್ಕಟ್ಟಾಗಿವೆ. ದೊಡ್ಡ ದೊಡ್ಡ ವಾಹನಗಳ ಬಂದರೆ ಸುಗಮವಾಗಿ ಪಾಸ್ ಆಗಲು ಇದರಿಂದ ಅಡೆತಡೆ ನಿರ್ಮಾಣವಾಗುತ್ತದೆ. ಅದೂ ಅಲ್ಲದೆ ಕೆಲವೊಂದು ಕಡೆ ಈ ಮಿನಿ ಟ್ಯಾಂಕ್‌ಗಳ ಮೇಲ್ಭಾಗ ಮುಚ್ಚಳವೇ ಇಲ್ಲ. ಮಳೆ ಬಂದಾಗ ಇದರಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಗಾಳಿಗೆ ಮರಗಿಡಗಳ ಎಲೆ, ಕಸಕಡ್ಡಿ ಬಿದ್ದು ನೀರಿನ ಜೊತೆ ಸೇರಿ ಕೊಳೆತು ಕಬ್ಬು ವಾಸನೆ ಬರುತ್ತದೆ.
ವೇಮಗಲ್‌ನ ಬಸ್ ನಿಲ್ದಾಣದ ಸಮೀಪ, ನರಸಾಪುರ ಸರ್ಕಲ್‌ನಲ್ಲಿರುವ ಮಿನಿ ನೀರಿನ ಟ್ಯಾಂಕ್ ರಸ್ತೆಯ ಜಾಗವನ್ನು ಆವರಿಸಿರುವುದರಿಂದ ರಾಜ್ಯ ಹೆದಾರಿ ಮುಖ್ಯ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲು ತೊಂದರೆಯಾಗುತ್ತದೆ. ಇನ್ನು ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯಲ್ಲಿರುವ ಮಿನಿ ನೀರಿನ ಟ್ಯಾಂಕ್ ಸುತ್ತಲು ಕಸ ತುಂಬಿಕೊಂಡಿದ್ದು, ಸೊಳ್ಳೆ ಹಾಗೂ ಗಬ್ಬು ವಾಸನೆಗೆ ಕಾರಣವಾಗಿದೆ. ಬಿ2 ಬ್ಲಾಕ್‌ನ ಮುಖ್ಯ ರಸ್ತೆಯಲ್ಲಿ ಮಿನಿ ಟ್ಯಾಂಕ್ ಇದ್ದು, ಇದೂ ಕೂಡ ಯಾರಿಗೂ ಪ್ರಯೋಜನವಿಲ್ಲ. ಪಟ್ಟಣದ ಒಳಭಾಗದ ರಸ್ತೆಗಳಲ್ಲಿ ಇಂತಹ ಸುಮಾರು ಹತ್ತಕ್ಕೂ ಹೆಚ್ಚು ಉಪಯೋಗಕ್ಕೆ ಬಾರದ ಮಿನಿ ನೀರಿನ ಟ್ಯಾಂಕ್‌ಗಳಿದ್ದು ಪಟ್ಟಣ ಪಂಚಾಯಿತಿಯು ಕೂಡಲೇ ಇವುಗಳನ್ನು ತೆರೆವುಗೊಳಿಸಬೇಕು ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಹಿಂದೆ ಮನೆಮನೆಗೆ ಕೊಳಾಯಿ ಸಂಪರ್ಕ ಇಲ್ಲದಿದ್ದ ಸಂದರ್ಭದಲ್ಲಿ ಕಿರುಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡುತ್ತಿದರು. ಈಗ ಪ್ರತಿ ಮನೆಗೂ ಕೊಳವೆ ಸಂಪರ್ಕವಿದ್ದು ಜನ ಇದನ್ನು ಬಳಸುತ್ತಿಲ್ಲ. ಶೀಘ್ರದಲ್ಲಿ ಅನುಪಯುಕ್ತವಾದ ಟ್ಯಾಂಕ್‌ಗಳನ್ನು ತೆರವುಗೊಳಿಸಲಾಗುವುದು
- ವೆಂಕಟೇಶ್ ವೇಮಗಲ್ ಕುರುಗಲ್ ಪ.ಪಂ ಮುಖ್ಯಾಧಿಕಾರಿ
ಮಿನಿ ಟ್ಯಾಂಕರ್‌ಗಳು ಈಗ ಉಪಯೋಗಕ್ಕೆ ಇಲ್ಲ. ಯಾವ ಟ್ಯಾಂಕಿಗೂ ನೀರಿನ ಪೂರೈಕೆ ಇಲ್ಲ ಬಳಕೆಯೂ ಇಲ್ಲ. ರಸ್ತೆಯ ಜಾಗ ವ್ಯರ್ಥವಾಗಿದೆ. ಸೊಳ್ಳೆಗಳಿಂದ ರೋಗಗಳಿಗೂ ಕಾರಣವಾಗಬಹುದು. ಪ.ಪಂ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು
-ಕಲ್ವಮಂಜಲಿ ರಾಮ ಶಿವಣ್ಣ ಸ್ಥಳೀಯ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.