ADVERTISEMENT

ವೇಮಗಲ್: ಉದ್ಯಾನದ ಕೊರತೆ

ಹೆಚ್ಚುತ್ತಿರುವ ಪಟ್ಟಣದಲ್ಲಿ ಶೀಘ್ರವೇ ಉದ್ಯಾನ ನಿರ್ಮಾಣಕ್ಕೆ ಸ್ಥಳೀಯರ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:19 IST
Last Updated 24 ಸೆಪ್ಟೆಂಬರ್ 2025, 7:19 IST
ತಾಳೆ ಕೆರೆಯ ಅಭಿವೃದ್ಧಿಗೊಂಡ ಸ್ಥಳದ ಎದುರು ಇರುವ ಬೆಳೆದ ಗಿಡಗಂಟಿಗಳು
ತಾಳೆ ಕೆರೆಯ ಅಭಿವೃದ್ಧಿಗೊಂಡ ಸ್ಥಳದ ಎದುರು ಇರುವ ಬೆಳೆದ ಗಿಡಗಂಟಿಗಳು   

ವೇಮಗಲ್: ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಒಂದಾಗಿರುವ ವೇಮಗಲ್‌ನಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಇಲ್ಲಿನ ನಿವಾಸಿಗಳ ವಾಯು ವಿಹಾರ, ವಿಶ್ರಾಂತಿ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗಾಗಿ ಉದ್ಯಾನವನವೇ ಇಲ್ಲದಂತಾಗಿದೆ. 

ಪಟ್ಟಣದಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಗಮನವೇ ಹರಿಸಿಲ್ಲ ಎಂಬುದು ಸ್ಥಳೀಯರ ಆಕ್ರೋಶ.

ಪಟ್ಟಣದಲ್ಲಿ ಉದ್ಯಾನ ಇಲ್ಲದ ಕಾರಣ ಮಕ್ಕಳು ಮನೆಯಿಂದ ಹೊರಗೆ ಆಟವಾಡಲು ಯೋಗ್ಯ ಸ್ಥಳ ಇಲ್ಲದಂತಾಗಿದೆ. ಇದರಿಂದಾಗಿ ಮಕ್ಕಳು ಮನೆಯಲ್ಲಿ ಮೊಬೈಲ್‌ ಮತ್ತು ಟಿವಿಗಳಿಗೆ ಸೀಮಿತರಾಗಿದ್ದಾರೆ ಎಂದು ಹಿರಿಯ ನಿವಾಸಿ ಬೈರಪ್ಪ ಹೇಳಿದರು. 

ADVERTISEMENT

ಸಾರ್ವಜನಿಕ ಉದ್ಯಾನವು ಪಟ್ಟಣದ ಸೌಂದರ್ಯ ಹೆಚ್ಚಿಸುವುದಲ್ಲದೆ, ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಹಸಿರು ಪ್ರದೇಶಗಳು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಸಮುದಾಯದ ಬಾಂಧವ್ಯವನ್ನು ಬಲಪಡಿಸುತ್ತದೆ.

ವೇಮಗಲ್ ಕೈಗಾರಿಕಾ ಪ್ರದೇಶವಾಗಿರುವ ಕಾರಣ ವಾಯು ಮಾಲಿನ್ಯದ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕ ಉದ್ಯಾನಗಳು ವಾಯು ಶುದ್ಧೀಕರಣಕ್ಕೆ ಸಹಾಯ ಮಾಡುತ್ತವೆ ಮತ್ತು ಪರಿಸರ ಸಮತೋಲನ ಕಾಪಾಡುತ್ತವೆ. ಹಸಿರು ಪ್ರದೇಶಗಳು ನಗರದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡಿ, ಆಮ್ಲಜನಕ ಹೆಚ್ಚಿಸುತ್ತವೆ. ಇದರಿಂದ ಪಟ್ಟಣದ ನಾಗರಿಕರ ಆರೋಗ್ಯ ಸುಧಾರಿಸುತ್ತದೆ.

ಸಾರ್ವಜನಿಕ ಉದ್ಯಾನದಲ್ಲಿ ಮಕ್ಕಳಿಗೆ ಆಟದ ಉಪಕರಣಗಳು, ವೃದ್ಧರಿಗೆ ಕುಳಿತುಕೊಳ್ಳಲು ಆಸನಗಳು, ವಾಕಿಂಗ್ ಟ್ರ್ಯಾಕ್ ಮತ್ತು ಸುಂದರವಾದ ಹೂವಿನ ಗಿಡಗಳನ್ನು ಅಳವಡಿಸಬೇಕು ಎಂಬುದು ಪಟ್ಟಣದ ನಿವಾಸಿಗಳ ಅಪೇಕ್ಷೆ.

ಕೋಲಾರ ರಸ್ತೆಯ ತಾಳಕೆರೆಯನ್ನು ಮಿತ್ಸುಬಿಷಿ ಎಲಿವೇಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಿಎಸ್ಆರ್ ಅನುದಾನದ ಅಡಿ ಅಭಿವೃದ್ಧಿಪಡಿಸಿದ್ದು ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಿದೆ. ಆದರೆ ಇಲ್ಲಿ ಗಿಡಮರ ಪೊದೆಗಳು ತುಂಬಿಕೊಂಡಿವೆ. ಜೊತೆಗೆ ಇದು ಕೆರೆ ಬಳಿ ಇರುವುದರಿಂದ ಹಾವು, ಚೇಳು ಸೇರಿದಂತೆ ಇನ್ನಿತರ ಕ್ರಿಮಿಕೀಟಗಳ ಕಾಟ ಹೆಚ್ಚಾಗಿದೆ. ಇಲ್ಲಿ ಇದರ ಸುತ್ತಲೂ ಹೆಚ್ಚು ಪೊದೆ ಬೆಳೆದಿದ್ದು, ಮುಂದೆ ಕೆರೆಯ ನೀರು ನಿಂತಿರುವುದರಿಂದ ಸಂಜೆಯಾದರೆ ಸೊಳ್ಳೆಗಳ ಕಾಟ ಜಾಸ್ತಿ ಇರುತ್ತದೆ. ಇದರಿಂದ ಈ ಕಡೆ ಯಾರು ಸುಳಿಯುವುದೇ ಇಲ್ಲ ಎಂದು ಸ್ಥಳೀಯರು ದೂರಿದರು. 

ಈ ಪಟ್ಟಣದ ಅಗತ್ಯಗಳನ್ನು ಪರಿಗಣಿಸಿ, ಒಂದು ಸುಂದರ ಮತ್ತು ಉತ್ತಮ ಸಾರ್ವಜನಿಕ ಉದ್ಯಾನವನ್ನು ನಿರ್ಮಿಸಲು ಸ್ಥಳೀಯ ಆಡಳಿತವು ಶೀಘ್ರವೇ ಕಾರ್ಯಪ್ರವೃತ್ತವಾಗಬೇಕು ಎಂಬುದು ವೇಮಗಲ್‌ ಜನರ ಪ್ರಮುಖ ಬೇಡಿಕೆ.

ತಾಳೆಕೆರೆಗೆ ಕಾಲುವೆ ಮೂಲಕ ನೀರು ಕೆರೆ ಸೇರುತ್ತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿರುವುದು
ಕೋಲಾರ ರಸ್ತೆಯ ತಾಳಕೆರೆಯನ್ನು ಮಿತ್ಸುಬಿಷಿ ಎಲಿವೇಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ಸಿಎಸ್ಆರ್ ಅನುದಾನದ ಅಡಿ ಅಭಿವೃದ್ಧಿಪಡಿಸಿದ್ದು ಕುಳಿತುಕೊಳ್ಳಲು ಆಸನಗಳನ್ನು ನಿರ್ಮಾಣ ಮಾಡಿರುತ್ತಾರೆ

ಪಟ್ಟಣ ಅಭಿವೃದ್ಧಿ ಯೋಜನೆ ಅಮೃತ್ 2.0 ಅಡಿಯಲಿ ಪಟ್ಟಣದ ಮೂರು ಕಡೆ ಉದ್ಯಾನಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು ಶೀಘ್ರವೇ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಪ್ರಾರಂಭವಾಗಲಿದೆ. ವೆಂಕಟೇಶ್ ಮುಖ್ಯಸ್ಥ ವೇಮಗಲ್

- ಕುರುಗಲ್ ಪಟ್ಟಣ ಪಂಚಾಯಿತಿ

‘ವಿಶ್ರಾಂತಿಗೆ ಸೂಕ್ತ ಸ್ಥಳವಿಲ್ಲ’ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಜನರಿಗೆ ವಿಶ್ರಾಂತಿ ಪಡೆಯಲು ಮಕ್ಕಳಿಗೆ ಆಟವಾಡಲು ಯಾವುದೇ ಸಾರ್ವಜನಿಕ ಉದ್ಯಾನವಿಲ್ಲ. ಹಿರಿಯ ನಾಗರಿಕರು ಮತ್ತು ಯುವಕರಿಗೆ ಬೆಳಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ವಾಕಿಂಗ್ ಮಾಡಲು ವ್ಯಾಯಾಮ ಮಾಡಲು ಸೂಕ್ತವಾದ ಸ್ಥಳದ ಕೊರತೆ ಇದೆ. ಈ ಕೊರತೆ ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ರಾಮು ಶಿವಣ್ಣ ಯುವ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.