
ಮಾಲೂರು: ಯೋಗಿ ವೇಮನ ಅವರ ತತ್ವಗಳು, ಸಮಾನತೆ ಹಾಗೂ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರೆಡ್ಡಿ ಜನ ಸಂಘದ ವತಿಯಿಂದ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಯೋಗಿ ವೇಮನ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದರು.
17ನೇ ಶತಮಾನದಲ್ಲಿಯೇ ಮೂಢನಂಬಿಕೆ ವಿರುದ್ಧ ಹೋರಾಡಿದ ಮಹಾನ್ ನಾಯಕರು ವೇಮನ. ಇವರ ಪದ್ಯಗಳು ಆಂಧ್ರದಲ್ಲಿ ಹೆಚ್ಚು ಜನಪ್ರಿಯವಾಗಿವೆ ಎಂದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ವೇಮನ ಅವರ ಪುತ್ಥಳಿ ಅನಾವರಣ ಮಾಡಲಾಗುವುದು. ಜೊತೆಗೆ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ನಮ್ಮ ಜಿಲ್ಲೆಯವರು. ಅವರ ಪುತ್ಥಳಿಯನ್ನು ಜಿಲ್ಲಾ ಕೇಂದ್ರದಲ್ಲಿ ಇಲ್ಲಿಯವರೆಗೂ ಮಾಡಿಲ್ಲ. ಪುತ್ಥಳಿ ನಿರ್ಮಾಣಕ್ಕೆ ಎಲ್ಲಾ ಶಾಸಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಾರ್ಚ್‌ಗೆ ಡೇರಿ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರಲಿದ್ದಾರೆ. ಅದೇ ಸಂದರ್ಭದಲ್ಲಿ ಕೆ.ಸಿ.ರೆಡ್ಡಿ ಅನಾವರಣ ಮಾಡಲಾಗುವುದು ಎಂದರು.
ತಹಶೀಲ್ದಾರ್ ಎಂ.ವಿ.ರೂಪ, ಇಒ ಕೃಷ್ಣಪ್ಪ, ತಾಲ್ಲೂಕು ರೆಡ್ಡಿ ಜನಾಂಗದ ಅಧ್ಯಕ್ಷ ರಾಮಸ್ವಾಮಿ ರೆಡ್ಡಿ, ಎಂ.ವಿ.ವೇಮನ, ಹನುಮಂತರೆಡ್ಡಿ, ರವಿರೆಡ್ಡಿ, ಅಶ್ವಥ ರೆಡ್ಡಿ, ಬಾಬು ರೆಡ್ಡಿ, ಮುನಿರೆಡ್ಡಿ ಇತರರು ಭಾಗವಹಿಸಿದ್ದರು.
ಒಂದೇ ವೇದಿಕೆಯಲ್ಲಿ ಎರಡು ಬಾರಿ ಜಯಂತಿ
ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಯೋಗಿ ವೇಮನ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ‘ತಾಲ್ಲೂಕು ಆಡಳಿತದ ನಡೆ ಗ್ರಾಮೀಣ ಭಾಗದ ಕಡೆ’ ಕಾರ್ಯಕ್ರಮವಿದ್ದರಿಂದ ಶಾಸಕರು ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ಬೆಳಗ್ಗೆ 9ಕ್ಕೆ ಜಯಂತಿ ಆಚರಿಸಿ ಗ್ರಾಮಗಳತ್ತ ಹೊರಟರು. ಆದರೆ 10ಕ್ಕೆ ಬಂದ ರೆಡ್ಡಿ ಸಮುದಾಯವರು ನಮಗೆ 10 ಗಂಟೆಗೆ ಕಾರ್ಯಕ್ರಮ ಎಂದು ತಿಳಿಸಿ ನಾವು ಬರುವ ಮೊದಲೇ ಕಾರ್ಯಕ್ರಮ ಮುಗಿಸಿರುವುದು ಸರಿಯಲ್ಲ ಎಂದು ತಕರಾರು ತೆಗೆದರು. ಹಾಗಾಗಿ ರೆಡ್ಡಿ ಜನ ಸಂಘಟ ತಾಲ್ಲೂಕು ಅಧ್ಯಕ್ಷ ರಾಮಸ್ವಾಮಿ ರೆಡ್ಡಿ ಮತ್ತೆ ಕಾರ್ಯಕ್ರಮ ಆರಂಭಿಸಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.