ADVERTISEMENT

ಶಿಷ್ಟಾಚಾರ ಉಲ್ಲಂಘನೆ: ಶಿಸ್ತು ಕ್ರಮಕ್ಕೆ ಸೂಚನೆ

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 16:06 IST
Last Updated 27 ಡಿಸೆಂಬರ್ 2019, 16:06 IST

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ನರೇಗಾ ಅನುದಾನದಲ್ಲಿ ನಿರ್ಮಿಸಲಾಗಿದ್ದ ಅಂಗನವಾಡಿ ಕೇಂದ್ರ ಉದ್ಘಾಟನೆ ಸಮಾರಂಭಕ್ಕೆ ಜಿ.ಪಂ ಹಾಗೂ ತಾ.ಪಂ ಹಾಲಿ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಉಪ ಕಾರ್ಯದರ್ಶಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿ.ಪಂ ಹಾಗೂ ತಾ.ಪಂ ಹಾಲಿ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನ ಮಾಡಲಾಗಿದೆ, ಕಾರ್ಯಕ್ರಮ ಆಯೋಜಕರು ಇಲ್ಲಿ ಪಕ್ಷ ಧೋರಣೆ ಅನುಸರಿಸಿದ್ದಾರೆ’ ಎಂದರು.

‘ಕಸಬಾ ಜಿ.ಪಂ ಕ್ಷೇತ್ರದ ಎಂ.ವಿ.ಶ್ರೀನಿವಾಸ್ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದು, ಇವರ ಜತೆಗೆ ತಾ.ಪಂ ಸದಸ್ಯರು ಸಹ ಜೆಡಿಎಸ್ ಪಕ್ಷದವರೇ ಆಗಿದ್ದಾರೆ, ರಾಜಕೀಯವಾಗಿ ಪಕ್ಷ ನೋಡಬೇಕು, ಆದರೆ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯ ಹಿರಿಯ ನಾಯಕರೇ ಪಕ್ಷ ಬೇಧ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಗ್ರಾ.ಪಂ ಚುನಾವಣೆ ಸಮೀಪಿಸುತ್ತಿರುವುದರಿಂದ ಗ್ರಾಮಗಳಲ್ಲಿನ ಮುಖಂಡರು ಶಾಸಕರ ಮೇಲೆ ಒತ್ತಡ ಹಾಕಿ ಜಿ.ಪಂ ಸಿಇಒ ಗಮನಕ್ಕೂ ತಾರದೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತಿದ್ದು, ಮರು ಕಳುಹಿಸದಂತೆ ಎಚ್ಚರವಹಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಸದಸ್ಯ ಎಂ.ವಿ.ಶ್ರೀನಿವಾಸ್ ಮಾತನಾಡಿ, ‘ನರೇಗಾ ಅನುದಾನದಿಂದ ಜೆ.ತಿಮ್ಮಸಂದ್ರ ಗ್ರಾ.ಪಂ ವ್ಯಾಪ್ತಿಯ ಪಾತಪಲ್ಲಿ, ಅಲಂಬಗಿರಿ ಹಾಗೂ ಕಲ್ಲೂರು ಗ್ರಾಮದಲ್ಲಿ ತಲಾ 8 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿದ್ದು ಜನಪ್ರತಿನಿಧಿಗಳನ್ನು ಆಹ್ವಾನಿಸುವಲ್ಲಿ ತಾರತಮ್ಯ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಡಿ.18ರಂದು ಆಯೋಜಿಸಿದ್ದ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದ ಶಿಲಾನ್ಯಾಸದಲ್ಲಿ ಜಿ.ಪಂ ಮಾಜಿ ಸದಸ್ಯ ಅಯ್ಯಪ್ಪ, ತಾ.ಪಂ ಮಾಜಿ ಸದಸ್ಯ ಕೆ.ಕೆ.ಮಂಜುನಥ್ ಹೆಸರನ್ನು ಹಾಕಲಾಗಿದೆ. ಇವರು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದಾರೆ, ಮಾಜಿ ಸದಸ್ಯರ ಹೆಸರು ಹಾಕಲು ಕಾನೂನಿನಲ್ಲಿ ಅವಕಾಶ ಇದಿಯೇ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಜಿ.ಪಂ ಸದಸ್ಯರ ಪಾತ್ರವೂ ಪ್ರಮುಖವಾಗಿದೆ. ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸ ಮಾಡುವ ಮಾತ್ರಕ್ಕೆ ನಾವ್ಯಾಕೆ ಬೇಕೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.