ADVERTISEMENT

ವಿವೇಕಾನಂದರು ಯುವ ಶಕ್ತಿಯ ಪ್ರತೀಕ: ಸಂಸದ ಮುನಿಸ್ವಾಮಿ ಅಭಿಪ್ರಾಯ

ಚಿಂತನಾಶೀಲತೆಯ ವ್ಯಕ್ತಿ: ಸಂಸದ ಮುನಿಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 14:36 IST
Last Updated 12 ಜನವರಿ 2022, 14:36 IST
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು   

ಕೋಲಾರ: ‘ಮೇದಾವಿ ಮತ್ತು ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ಸದಾ ಚಿಂತನಾಶೀಲತೆಯ ವ್ಯಕ್ತಿಯಾಗಿದ್ದು, ಅವರೇ ಯುವಕ ಯುವತಿಯರಿಗೆ ಆದರ್ಶಪ್ರಾಯರು’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಳ್ಳಿಹಾಡು ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯುವ ಸಪ್ತಾಹ ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಮಕೃಷ್ಣ ಪರಮಹಂಸರ ಶಿಷ್ಯರಾದ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ಭಾರತೀಯ ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದರು. ಅವರು ಭಾರತೀಯ ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ತಮ್ಮ 30ನೇ ವಯಸ್ಸಿನಲ್ಲೇ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಅವಿಸ್ಮರಣೀಯ. ಯುವಕರು ಜೀವನದಲ್ಲಿ ಅವರ ವಿಚಾರಧಾರೆ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಯುವ ಶಕ್ತಿಯ ಪ್ರತೀಕವಾದ ವಿವೇಕಾನಂದರು ಭಾರತೀಯತೆ ಮತ್ತು ಸಹಬಾಳ್ವೆ ಬಗ್ಗೆ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಿದರು. ಧರ್ಮ ಸಮನ್ವಯ ಹಾಗೂ ಸರ್ವ ಧರ್ಮ ಗೌರವದ ಬಗ್ಗೆ ಪ್ರಪಂಚವೇ ಒಪ್ಪುವ ಸಂದೇಶ ನೀಡಿದ ಮಹಾನ್ ವ್ಯಕ್ತಿ’ ಎಂದು ಸ್ಮರಿಸಿದರು.

‘ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಯೋಗಾಭ್ಯಾಸ ನಡೆಸಿದರು. ತಪ್ಪು ದಾರಿಯತ್ತ ಸಾಗುತ್ತಿದ್ದ ಸಮಾಜವನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದರು. ಯುವಕ, ಯುವತಿಯರು ದೇಶದ ಶಕ್ತಿಯಾಗಿದ್ದಾರೆ. ಆದರೆ, ಮಾರ್ಗದರ್ಶನದ ಕೊರತೆಯಿಂದ ಯುವ ಮನಸ್ಸುಗಳು ಬೇಡವಾದ ವಿಷಯದ ಕಡೆ ಗಮನ ಹರಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ನಿರ್ಮೂಲನೆ: ‘ದೇಶದಲ್ಲಿ ಶೇ 50ರಷ್ಟು ಯುವ ಸಂಪನ್ಮೂಲವಿದೆ. ಯುವಕ ಯುವತಿಯರು ಮಾರ್ಗದರ್ಶನದ ಕೊರತೆಯಿಂದ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಯುವಕರು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದು ವಿವೇಕಾನಂದರು ನಂಬಿದ್ದರು. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಕಾರ್ಯಪ್ರವೃತ್ತವಾಗಬೇಕು. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ದೇಶದ ಕಟ್ಟಕಡೆಯ ವ್ಯಕ್ತಿಗೂ ಮೂಲಸೌಕರ್ಯ ದೊರೆಯಬೇಕು’ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ.ಚಂದ್ರರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ನಗರಸಭೆ ಸದಸ್ಯ ರಾಜೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.