ADVERTISEMENT

ಬೆಂಗಳೂರು ಸುತ್ತಲಿನ ಒಕ್ಕಲಿಗರ ಭೂಮಿ ಉಳಿಯಲ್ಲ: ಆದಿಚುಂಚನಗಿರಿ ಸ್ವಾಮೀಜಿ ಆತಂಕ

ಹೋರಾಟಕ್ಕೆ ಕರೆದಾಗ ಬನ್ನಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 13:37 IST
Last Updated 17 ಅಕ್ಟೋಬರ್ 2022, 13:37 IST
ಆದಿಚುಂಚನಗಿರಿ ಸ್ವಾಮೀಜಿ
ಆದಿಚುಂಚನಗಿರಿ ಸ್ವಾಮೀಜಿ    

ಕೋಲಾರ: ‘ಮೀಸಲಾತಿ ವಿಚಾರವಾಗಿ 1993ರಲ್ಲಿ ದೊಡ್ಡ ಚಳವಳಿ ನಡೆದಿತ್ತು. ಮತ್ತೊಂದು ಅಂಥ ಹೋರಾಟದ ಅವಶ್ಯದ ಬಗ್ಗೆ ಸಮುದಾಯದ ಮುಖಂಡರು ಮಾತನಾಡುತ್ತಿದ್ದಾರೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಭಾಗದಲ್ಲಿ ಒಕ್ಕಲಿಗರ ಭೂಮಿ ಕೈತಪ್ಪುತ್ತಿದೆ. ಮುಂದೆ ಸ್ವಾಮೀಜಿಗಳು ಹೋರಾಟಕ್ಕೆ ಕರೆ ನೀಡಿದಾಗ ಬರಲು ಒಕ್ಕಲಿಗರು ಸಿದ್ಧರಿರಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ‌ ಕರೆ ನೀಡಿದರು.

ನಗರದಲ್ಲಿ ಸೋಮವಾರ ಒಕ್ಕಲಿಗರ ಸಾಂಸ್ಕೃತಿಕ ಭವನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಶೇ 16ರಷ್ಟು ಇರುವ ಒಕ್ಕಲಿಗರಿಗೆ ಶೇ 4 ಮೀಸಲಾತಿ ಸಾಕಾಗುವುದಿಲ್ಲ; ನಮ್ಮ ಬೇಡಿಕೆ ಕಾನೂನಿನ ಪ್ರಕಾರ ಈಡೇರದಿದ್ದರೆ ಮುಂದೆ ಧ್ವನಿ ಎತ್ತಬೇಕೆಂಬ ಆಗ್ರಹವೂ ಸಮುದಾಯದಲ್ಲಿದೆ’ ಎಂದರು.

‘ಒಟ್ಟಾರೆ ಮೀಸಲಾತಿ ಶೇ 50 ದಾಟುವಂತಿಲ್ಲ ಎಂಬುದು ಕಾನೂನಿನ ಆಶೋತ್ತರವಾಗಿದೆ. ಆದರೆ, ಆ ಮಿತಿ ದಾಟಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕೈಹಾಕುವುದಾದರೆ ಒಕ್ಕಲಿಗರಿಗೂ ಶೇ 4ರಿಂದ 12ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಭಾವನೆಯೂ ಸಮುದಾಯದಲ್ಲಿದೆ’ ಎಂದು ಹೇಳಿದರು.

ADVERTISEMENT

‘ಧರ್ಮದ ವಿಚಾರವಾಗಿ ನಾವು ಹಿಂದೂಗಳು ಎಂದು ಕೂಗುತ್ತೇವೆ. ಹಿಂದೂ ಧರ್ಮದ ಬಗ್ಗೆ ತಮಗೇನು ಗೊತ್ತು ಎಂಬುದಾಗಿ ಅನ್ಯ ಧರ್ಮೀಯರು ಕೇಳಿದರೆ ರಾಮಾಯಣ, ಮಹಾಭಾರತ, ಬೋಜರಾಜನ ಕಥೆ ಬಿಟ್ಟರೆ ಮತ್ತೊಂದು ಗೊತ್ತಿಲ್ಲ. ಹೀಗಾಗಿ, ಕಾನೂನು, ಸಂವಿಧಾನ, ನಮ್ಮ ಸಂಖ್ಯೆ, ಬಡವರು ಎಷ್ಟಿದ್ದಾರೆ ಎಂಬೆಲ್ಲಾ ವಿಚಾರ ಗೊತ್ತಿರಬೇಕು’ ಎಂದರು.

‘ಬೆಂಗಳೂರಿನ ಈಗಿನ ಜನಸಂಖ್ಯೆ ಒಂದೂವರೆ ಕೋಟಿ. ರಾಜ್ಯದ ಶೇ 60 ಆದಾಯ ಬೆಂಗಳೂರಿನಿಂದಲೇ ಬರುತ್ತದೆ. ಇದಕ್ಕೆ ಬೇಕಾದ ಪೂರಕ ಸೌಲಭ್ಯ ನಿರ್ಮಿಸಲು ಈ ಭಾಗದ ರೈತರ ಭೂಮಿ ಪಡೆಯಲಾಗಿದೆ. ಆ ಭಾಗದ ಒಕ್ಕಲಿಗರ ಪ್ರಮಾಣ ಶೇ 70ಕ್ಕೂ ಅಧಿಕವಿದೆ. ಒಕ್ಕಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಕಳೆದುಕೊಂಡಿದ್ದಾರೆ’ ಎಂದರು.

‘ಜಮೀನು ಕಳೆದುಕೊಂಡ ಒಕ್ಕಲಿಗರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಕೊಳೆಗೇರಿಗಳಲ್ಲಿ ವಾಸಿಸುತ್ತಾ ಕೂಲಿ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘2050ರ ಹೊತ್ತಿಗೆ ಬೆಂಗಳೂರಿನ ಜನಸಂಖ್ಯೆ 4.5 ಕೋಟಿಗೆ ಹೆಚ್ಚಲಿದೆ ಎಂಬುದಾಗಿ ಈಚೆಗೆ ಮುಖ್ಯಮಂತ್ರಿಯೇ ಹೇಳಿದ್ದಾರೆ. ಅದಕ್ಕೆ ಮತ್ತಷ್ಟು ಭೂಮಿ ಬೇಕು. ಹಾಗಾದರೆ ಭೂಮಿ ಎಲ್ಲಿದೆ? ಹೀಗಾಗಿ, ಒಕ್ಕಲಿಗರು ಹೆಚ್ಚಿರುವ ಈ ಭಾಗದ ಭೂಮಿ ಉಳಿಯಲ್ಲ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಉಳಿಯಲ್ಲ. ಮುಂದಿನ 30 ವರ್ಷಗಳಲ್ಲಿ ಒಕ್ಕಲಿಗರ ಪರಿಸ್ಥಿತಿ ನೆನಪಿಸಿಕೊಂಡರೆ ತುಂಬಾ ಭಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬರೀ ರಾಜಕಾರಣ ಮಾಡುತ್ತಾ ಈ ದಿಸೆಯಲ್ಲಿ ಚಿಂತಿಸದೆ ಹೋದರೆ ಬದುಕು ಕಷ್ಟವಾಗುತ್ತದೆ. ಹೀಗಾಗಿ, ಸಮಿತಿ ರಚಿಸಿ ಅಧ್ಯಯನ ಹಾಗೂ ಸಮೀಕ್ಷೆ ನಡೆಸಬೇಕಿದೆ’ ಎಂದು ಹೇಳಿದರು.

ಶಿರಾ ತಾಲೂಕಿನ ಪಟ್ಟದನಾಯಕನಹಳ್ಳಿ ಪೀಠಾಧ್ಯಕ್ಷ ನಂಜಾವದೂತ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಕಲ್ಪಿಸುತ್ತಿರುವ ಮೀಸಲಾತಿ ವೇಗ ನೋಡಿದರೆ ಶೇ 200 ಇದ್ದರೂ ಸಾಕಾಗಲ್ಲ. ನಮ್ಮ ಭವಿಷ್ಯ ಸರಿ ಮಾಡದಿದ್ದರೆ, ನಮ್ಮ ಬೇಡಿಕೆ ಪರಿಗಣಿಸದಿದ್ದರೆ ಮತ್ತೆ ದೊಡ್ಡ ಹೋರಾಟ ನಡೆಯಬಹುದು. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು’ ಎಂದರು.

ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಕೆ.ವಿ.ಶಂಕರಪ್ಪ, 'ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಆದರೆ, ಅದಕ್ಕಾಗಿ ಸಮುದಾಯದವರನ್ನು ಬೀದಿಗಿಳಿಸಬೇಡಿ ಎಂಬ ವಿಚಾರವನ್ನು ಸರ್ಕಾರಕ್ಕೆ ಸ್ವಾಮೀಜಿ ಮನವರಿಕೆ ಮಾಡಬೇಕು’ ಎಂದು ಬೇಡಿಕೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.