ADVERTISEMENT

ಮತ ಎಣಿಕೆ ಪ್ರಕ್ರಿಯೆಗೆ ಗೈರಾದರೆ ಶಿಕ್ಷೆ:ಸಿಬ್ಬಂದಿಗೆ ಡಿಸಿ ಮಂಜುನಾಥ್‌ ಎಚ್ಚರಿಕೆ

ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಮೇ 2019, 13:25 IST
Last Updated 16 ಮೇ 2019, 13:25 IST
ಲೋಕಸಭಾ ಚುನಾವಣೆಯ ಮತ ಎಣಿಕೆ ಸಂಬಂಧ ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.
ಲೋಕಸಭಾ ಚುನಾವಣೆಯ ಮತ ಎಣಿಕೆ ಸಂಬಂಧ ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.   

ಕೋಲಾರ: ‘ಲೋಕಸಭಾ ಚುನಾವಣೆಯ ಅಂತಿಮ ಮತ್ತು ಪ್ರಮುಖ ಘಟ್ಟವಾಗಿರುವ ಮತ ಎಣಿಕೆ ಪ್ರಕ್ರಿಯೆಗೆ ಗೈರಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆಯ ಮತ ಎಣಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮತದಾನ ಪ್ರಕ್ರಿಯೆಯಂತೆಯೇ ಮತ ಎಣಿಕೆಯೂ ಮಹತ್ವದ ಘಟ್ಟ. ಮತ ಎಣಿಕೆ ಕಾರ್ಯವನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

‘ಸಿಬ್ಬಂದಿಗೆ ಯಾವುದೇ ಅನುಮಾನವಿದ್ದರೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸಿಕೊಳ್ಳಬೇಕು. ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾದರೆ ಅಥವಾ ನಿಯಮ ಉಲ್ಲಂಘಿಸಿದರೆ 3 ತಿಂಗಳು ದಂಡ ಸಮೇತ ಶಿಕ್ಷೆಗೆ ಗುರಿಯಾಗುತ್ತೀರಿ’ ಎಂದು ಹೇಳಿದರು.

ADVERTISEMENT

‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ 2,013 ಮತಗಟ್ಟೆಗಳ ಮತ ಎಣಿಕೆಗೆ 108 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಮೇ 23ರಂದು ಬೆಳಿಗ್ಗೆ 5.30ಕ್ಕೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು’ ಎಂದು ಸೂಚಿಸಿದರು.

ಫಲಿತಾಂಶ ತಡ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 15 ಭದ್ರತಾ ಕೊಠಡಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಇರಿಸಲಾಗಿದೆ. ಮತ ಎಣಿಕೆ ದಿನ ಒಂದೊಂದೇ ಕೊಠಡಿಯ ಬೀಗ ತೆರೆದು ಇವಿಎಂ ನೀಡಲಾಗುತ್ತದೆ. ಕನಿಷ್ಠ 17ರಿಂದ 23 ಸುತ್ತುಗಳವರೆಗೆ ಎಣಿಕೆ ನಡೆಯುವುದರಿಂದ ಫಲಿತಾಂಶ ತಡವಾಗುತ್ತದೆ’ ಎಂದು ವಿವರಿಸಿದರು.

‘ಸಿಬ್ಬಂದಿ ಅವಸರ ಮಾಡಬಾರದು. ಚುನಾವಣಾ ಫಲಿತಾಂಶ ಸಂಬಂಧ ರಾತ್ರಿ 8 ಗಂಟೆಯೊಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ನೀಡಬೇಕಿದ್ದು, ಸಿಬ್ಬಂದಿಗೆ ಊಟ ತಿಂಡಿ ಸೇರಿದಂತೆ ಕೇಂದ್ರದಲ್ಲೇ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮೊಬೈಲ್‌ ನಿರ್ಬಂಧ: ‘ಮತ ಎಣಿಕೆ ದಿನದಂದು ಸಿಬ್ಬಂದಿಯು ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಯಾವುದೇ ಕಾರಣಕ್ಕೂ ಎಣಿಕೆ ಕೇಂದ್ರಕ್ಕೆ ಮೊಬೈಲ್‌ ತರಬಾರದು. ಕೇಂದ್ರದೊಳಗೆ ಮೊಬೈಲ್‌ ಬಳಕೆ ನಿರ್ಬಂಧಿಸಲಾಗಿದೆ’ ಎಂದು ಚುನಾವಣಾ ತರಬೇತುದಾರ ತಿಲಗರ್ ಹೇಳಿದರು.

‘ಸಿಬ್ಬಂದಿಯು ಯಾವ ಕ್ಷೇತ್ರದ, ಯಾವ ಕೊಠಡಿಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಬಗ್ಗೆ ಈಗಲೇ ಮಾಹಿತಿ ನೀಡುವುದಿಲ್ಲ. ಮೇ 22ರಂದು ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಈ ವಿಷಯ ತಿಳಿಸಲಾಗುವುದು. ಸಿಬ್ಬಂದಿ ಗೊಂದಲಕ್ಕೊಳಗಾಗದೆ ನೇರವಾಗಿ ತಮ್ಮ ಕೊಠಡಿಗೆ ತೆರಳಬಹುದು’ ಎಂದರು.

‘ಗುರುತಿನ ಚೀಟಿ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಚುನಾವಣಾ ಆಯೋಗದ ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಏಜೆಂಟರನ್ನು ಕೇಂದ್ರದೊಳಗೆ ಬಿಡಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಸಹ ಕೇಂದ್ರದೊಳಗೆ ಬರುವಂತಿಲ್ಲ. ಅಗತ್ಯ ಸಂದರ್ಭದಲ್ಲಿ ಚುನಾವಣಾಧಿಕಾರಿ ಸೂಚನೆ ಮೇರೆಗೆ ಪೊಲೀಸರು ಕೇಂದ್ರದೊಳಗೆ ಬರಬಹುದು. ರಾಜ್ಯ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಸಹ ಒಳಗೆ ಬರುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಟೇಬಲ್‌ ವ್ಯವಸ್ಥೆ: ‘ಶಿಡ್ಲಘಟ್ಟ ಕ್ಷೇತ್ರದ 242 ಮತಗಟ್ಟೆಗಳಿಗೆ 12 ಟೇಬಲ್, ಚಿಂತಾಮಣಿಯ 245 ಮತಗಟ್ಟೆಗಳಿಗೆ 14 ಟೇಬಲ್, ಶ್ರೀನಿವಾಸಪುರದ 266 ಮತಗಟ್ಟೆಗಳಿಗೆ 7, ಮುಳಬಾಗಿಲಿನ 279 ಮತಗಟ್ಟೆಗಳಿಗೆ 7, ಕೆಜಿಎಫ್‌ನ 234 ಮತಗಟ್ಟೆಗಳಿಗೆ 7, ಬಂಗಾರಪೇಟೆಯ 259 ಮತಗಟ್ಟೆಗಳಿಗೆ 7 ಟೇಬಲ್, ಕೋಲಾರದ 284 ಮತಗಟ್ಟೆಗಳಿಗೆ 14 ಹಾಗೂ ಮಾಲೂರಿನ 249 ಮತಗಟ್ಟೆಗಳಿಗೆ 7 ಟೇಬಲ್‌ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಬೇಕು. ಚುನಾವಣಾಧಿಕಾರಿ ಆದೇಶ ಮಾಡುವವರೆಗೂ ಎಣಿಕೆ ಕೇಂದ್ರ ಬಿಟ್ಟು ಹೊರ ಹೋಗುವಂತಿಲ್ಲ. ಮರು ಎಣಿಕೆಯ ಸಾಧ್ಯತೆ ಇರುತ್ತದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಎಣಿಕೆ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.