ADVERTISEMENT

ದೇಶದ ಅಭಿವೃದ್ಧಿಗೆ ಮತದಾನ ಮುಖ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:55 IST
Last Updated 27 ಜನವರಿ 2021, 15:55 IST
ಕೋಲಾರ ತಾಲ್ಲೂಕಿನ ಅಲ್ಲಿಕುಂಟೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಗ್ರಾಮಸ್ಥರು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕೋಲಾರ ತಾಲ್ಲೂಕಿನ ಅಲ್ಲಿಕುಂಟೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಗ್ರಾಮಸ್ಥರು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.   

ಕೋಲಾರ: ‘ಮತದಾನವು ಮೂಲಭೂತ ಹಕ್ಕು. ದೇಶದ ಅಭಿವೃದ್ಧಿಗೆ ಪ್ರತಿ ಮತವೂ ಮುಖ್ಯವಾಗಿದ್ದು, ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು’ ಎಂದು ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ ಕೋಲಾರ ನಂದಿನಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಅಲ್ಲಿಕುಂಟೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ‘ಹಣ, ಉಡುಗೊರೆ ಸೇರಿದಂತೆ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ನಗರವಾಸಿಗಳು ಶೈಕ್ಷಣಿಕವಾಗಿ ಮುಂದುವರಿದಿದ್ದರೂ ಅವರಿಗೆ ರಾಜಕೀಯ ಪ್ರಜ್ಞೆಯಿಲ್ಲ. ಪ್ರಜ್ಞಾವಂತ ಮತದಾರರೇ ಮತದಾನದಿಂದ ದೂರ ಉಳಿಯುತ್ತಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸಾರ್ವಜನಿಕರು ಸಂವಿಧಾನ ಓದಬೇಕು. ಜತೆಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅರಿತು ಮೂಲಭೂತ ಕರ್ತವ್ಯ ನಿರ್ವಹಿಸಬೇಕು. 18 ವರ್ಷ ತುಂಬಿದ ಯುವಕ -ಯುವತಿಯರು ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಬೇಕು. ಭಾರತದ ಚುನಾವಣಾ ಆಯೋಗವು ಜಗತ್ತಿನಲ್ಲೇ ಹೆಚ್ಚು ವಿಶ್ವಾಸನೀಯವಾಗಿದ್ದು, ಪಾರದರ್ಶಕವಾಗಿ ಚುನಾವಣೆ ನಡೆಸುತ್ತದೆ. ಪ್ರತಿ ಮತವೂ ಬೆಲೆ ಕಟ್ಟಲಾಗದ ಮೌಲ್ಯ ಹೊಂದಿದೆ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಗುಂಪುಗಾರಿಕೆ ಸಾಮಾನ್ಯ. ಆದರೆ, ಚುನಾವಣೆ ನಂತರ ಎಲ್ಲರೂ ಗ್ರಾಮಗಳ ಅಭಿವೃದ್ಧಿಗೆ ಮುಕ್ತವಾಗಿ ಚರ್ಚಿಸಿ ಉತ್ತಮ ಕ್ರಿಯಾಯೋಜನೆ ರೂಪಿಸಬೇಕು. ಭವ್ಯ ಭಾರತದ ಸಂವಿಧಾನದ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ಸಮಾಜದಲ್ಲಿ ಶಾಂತಿ ಕಾಪಾಡಬೇಕು’ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಸಂಘಟಕ ವಿಶ್ವನಾಥ್ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.