ಕೋಲಾರ: ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಬಲಿಷ್ಠ ಜಾತಿಗಳನ್ನು ಸೇರಿಸಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದವರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಮುಂಭಾಗ ಆರಂಭಗೊಂಡ ರ‍್ಯಾಲಿಯು ಎಂ.ಜಿ ರಸ್ತೆ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಮೆಕ್ಕೆ ವೃತ್ತಕ್ಕೆ ತೆರಳಿತು. ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೆಕ್ಕೆ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಮನವಿ ಆಲಿಸಬೇಕೆಂದು ಪಟ್ಟು ಹಿಡಿದರು. ರಸ್ತೆಯಲ್ಲಿ ಕೆಲವರು ಅಡ್ಡ ಮಲಗಿಕೊಂಡರು. ಹೀಗಾಗಿ, ವಾಹನಗಳ ಸವಾರರು ಪ್ರತಿಭಟನಕಾರರೊಂದಿಗೆ ಮಾತಿನ ಚಕಮಕಿಗೆ ಮುಂದಾದರು. ಈ ಭಾಗದ ಸುತ್ತಮುತ್ತ ಸಂಚಾರ ದಟ್ಟಣೆ ನಿರ್ಮಾಣವಾಯಿತಿ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಬಳಿಕ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ ಸ್ಥಳಕ್ಕೆ ಬಂದರು. ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ‘ನಮ್ಮ ಸಮುದಾಯವು ಬಹಳ ಹಿಂದುಳಿದಿದೆ, ಹೀಗಿರುವ ಸಂದರ್ಭದಲ್ಲಿ ಬಲಿಷ್ಠ ಜಾತಿಗಳನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗುತ್ತದೆ. ಹೀಗಾಗಿ, ವಿವಿಧ ಜಾತಿಗಳನ್ನು ಎಸ್‌ಟಿ ಸೇರ್ಪಡೆ ಮಾಡುವುದನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.
ಒತ್ತುವರಿ ತೆರವಿಗೆ ಆಗ್ರಹ: ಕೋಲಾರದ ವಾಲ್ಮೀಕಿ ಭವನದ ಬಳಿ ಜಾಗ ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಿ ಸಮುದಾಯ ಭವನಕ್ಕೆ ಸೇರಿದ ಆಸ್ತಿ ಉಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಆಗ ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿ, ‘ಜಾಗದ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಮಾತನಾಡುವುದು ಬೇಡ. ಉಳಿದ ಬೇಡಿಕೆಗಳ ಈಡೇರಿಕೆ ಕುರಿತ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖೇನ ಸರ್ಕಾರಕ್ಕೆ ಕಳುಹಿಸುವೆ’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸೇನೆ ರಾಜ್ಯ ಅಧ್ಯಕ್ಷ ಚಳುವಳಿ ನಾಗರಾಜ್, ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಹಳ್ಳಿ ನಾಗರಾಜ್, ಮುಖಂಡರಾದ ಆನಂದ್, ಹುಂಗೇನಹಳ್ಳಿ ವೆಂಕಟೇಶ್, ಕೆ.ಎಸ್.ಆರ್.ಟಿ.ಸಿ ಮುನಿಯಪ್ಪ, ಬೆಡಶೆಟ್ಟಿಹಳ್ಳಿ ರಮೇಶ್, ಮುರಳಿ, ನರಸಾಪುರ ನಾಗರಾಜ್, ಅಶ್ವಥ್, ಶ್ಯಾಮ್ ನಾಯಕ್ ಇದ್ದರು.
ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಮುಂಭಾಗ ರ‍್ಯಾಲಿ ಆರಂಭ | ಮಾನವ ಸರಪಳಿ ರಚಿಸಿ ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ತಡೆ | ಪ್ರತಿಭಟನಕಾರರ ಮನವಿ ಆಲಿಸಿದ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.