ಕೆಜಿಎಫ್: ಬಡಮಾಕನಹಳ್ಳಿ ಕಾಡಿನ ಸಮೀಪ ಕಟ್ಟಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಯೋಗಿಸಿಕೊಳ್ಳದೆ ಇರುವುದರಿಂದ ಅದು ಅನೈತಿಕ ಚಟುವಟಿಕೆ ತಾಣವಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಪ್ರತಿ ಗ್ರಾಮ ಪಂಚಾಯಿತಿ ಕಡ್ಡಾಯವಾಗಿ ತ್ಯಾಜ್ಯ ವಿಲೇವಾರಿ ಘಟಕ ಹೊಂದಿರಲೇಬೇಕು. ಈ ಹಿನ್ನೆಲೆಯಲ್ಲಿ ಗ್ರಾಮದ ಹೊರಭಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ₹9 ಲಕ್ಷ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಒಂದು ವರ್ಷದ ಹಿಂದೆಯೇ ನಿರ್ಮಾಣ ಮಾಡಿತ್ತು. ಆದರೆ, ಅದನ್ನು ಉಪಯೋಗಿಸದ ಕಾರಣ ಕುಡುಕರು ಮತ್ತು ಅನೈತಿಕ ಚಟುವಟಿಕೆ ತಾಣವಾಗಿದೆ.
ತ್ಯಾಜ್ಯ ಘಟಕದ ಸುತ್ತಲೂ ಮದ್ಯದ ಬಾಟಲಿ ಹೇರಳವಾಗಿ ಬಿದ್ದಿವೆ. ಘಟಕದ ಒಳಗೆ ಕೂಡ ಮಾಂಸದ ಅಡುಗೆ ಮಾಡಿರುವ ಕುರುಹು ಇದೆ. ಒಳಗೆ ಕೂಡ ಬಾಟಲಿ ರಾಶಿ ಎದ್ದು ಕಾಣುತ್ತಿದೆ. ಘಟಕ ಕಾಡಿನ ವಾತಾವರಣದಲ್ಲಿ ಇರುವುದರಿಂದ ಮತ್ತು ನಿರ್ಜನ ಪ್ರದೇಶವಾಗಿರುವುದರಿಂದ ಭಾನುವಾರ ಮತ್ತು ರಜಾ ದಿನಗಳಂದು ಸುತ್ತಮುತ್ತಲಿನ ಗ್ರಾಮಗಳ ಯುವಕರು ಘಟಕವನ್ನು ತಮ್ಮ ಅಡ್ಡೆಯನ್ನಾಗಿ ಮಾರ್ಪಾಟು ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ನಾಲ್ಕು ಕಡೆ ಐದು ಅಡಿ ಎತ್ತರದ ಗೋಡೆ ಮತ್ತು ಒಳಗಡೆ ಸಿಮೆಂಟ್‌ನಲ್ಲಿ ನಿರ್ಮಿಸಲಾಗಿರುವ ವಿಭಾಗ ಮಾತ್ರ ಇತ್ತು. ಇಷ್ಟು ಕಾಮಗಾರಿಗೆ ಒಂಬತ್ತು ಲಕ್ಷ ಖರ್ಚಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು. ಈಚೆಗೆ ತ್ಯಾಜ್ಯ ಘಟಕದ ಸಂಬಂಧ ಗ್ರಾಮಸ್ಥರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ನಂತರ ಈಚೆಗೆ ಘಟಕಕ್ಕೆ ಗ್ರಿಲ್ ಹಾಕಲಾಗಿದೆ. ಆದರೆ, ಕಸ ವಿಲೇವಾರಿ ನಡೆಯುತ್ತಿಲ್ಲ. ಜತೆಗೆ ಕಟ್ಟಡಕ್ಕೆ ಮಾಡಿರುವ ವೆಚ್ಚ ಗ್ರಾಮಸ್ಥರನ್ನು ಚಿಕಿತಗೊಳಿಸಿದೆ. ಕಾಮಗಾರಿ ಕಡಿಮೆ. ಆದರೆ, ವೆಚ್ಚ ಹೆಚ್ಚು ಎಂದು ದೂರಲಾಗಿದೆ.
ಕಸ ವಿಲೇವಾರಿ ಘಟಕ ಪ್ರಾರಂಭ ಮಾಡಲು ಬಡಮಾಕನಹಳ್ಳಿ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದ್ದರು. ಅಲ್ಲಿ ತ್ಯಾಜ್ಯ ಘಟಕ ಪ್ರಾರಂಭ ಮಾಡಲು ಸಾಧ್ಯವಾಗಲಿಲ್ಲ. ಗೊಲ್ಲಹಳ್ಳಿಯಲ್ಲಿ ಇರುವ ಹಳೆ ಕಟ್ಟಡದಲ್ಲಿ ಘಟಕವನ್ನು ತಾತ್ಕಾಲಿಕವಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಪಂಚಾಯಿತಿಯಿಂದ ಕಟ್ಟಲಾದ ಘಟಕಕ್ಕೆ ಗ್ರಿಲ್ ಅಳವಡಿಸಲಾಗಿದೆ. ಇದಕ್ಕೆ ಬಣ್ಣ ಬಳಿದು ನಂತರ ಪ್ರಾರಂಭ ಮಾಡಲಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ ಹೇಳಿದರು.
ಹಸಿ ಕಸ ಸಂಗ್ರಹಿಸಲು ಪಂಚಾಯಿತಿಗೆ ಆದೇಶ ಬಂದಿಲ್ಲ. ಒಣ ಕಸ ಮಾತ್ರ ಸಂಗ್ರಹಿಸುತ್ತಿದ್ದೇವೆಶ್ರೀನಿವಾಸಮೂರ್ತಿ ಪಿಡಿಒ
ಎರಡು ಬುಟ್ಟಿ ಕೊಟ್ಟಿದ್ದೇವೆ ಗ್ರಾಮ ಪಂಚಾಯಿತಿಗಳಲ್ಲಿ ಒಣಕಸ ಮತ್ತು ಹಸಿಕಸ ಸಂಗ್ರಹಿಸಲು ಮೊದಲಿನಿಂದಲೂ ಆದೇಶ ಇದೆ. ಈ ಕಾರಣಕ್ಕಾಗಿಯೇ ಪಂಚಾಯಿತಿ ವತಿಯಿಂದ ಪ್ರತಿ ಮನೆಗೂ ಎರಡು ಬುಟ್ಟಿ ನೀಡಲಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಹಸಿ ಕಸವನ್ನು ರೈತರು ತಿಪ್ಪೆಯನ್ನಾಗಿ ಮಾಡಿಕೊಳ್ಳುತ್ತಾರೆ. ಹಸಿ ಕಸ ಕೊಟ್ಟರೂ ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.