ADVERTISEMENT

ಬೇಸಿಗೆ ಹಿನ್ನೆಲೆ ಬತ್ತಿದ ಜೀವಸೆಲೆ: ಕೋಲಾರದಲ್ಲಿ ಜಲಕ್ಷಾಮ; ನಗರವಾಸಿಗಳ ಹಿಡಿಶಾಪ

ನೀರಿಗೆ ನೀರೆಯರ ಸೆಣಸಾಟ

ಜೆ.ಆರ್.ಗಿರೀಶ್
Published 14 ಏಪ್ರಿಲ್ 2019, 20:00 IST
Last Updated 14 ಏಪ್ರಿಲ್ 2019, 20:00 IST
ಕೋಲಾರದಲ್ಲಿ ಬೇಸಿಗೆ ಕಾರಣಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದ್ದು, ಆಜಾದ್‌ ನಗರ ಬಡಾವಣೆ ನಿವಾಸಿಗಳಿಗೆ ನಗರಸಭೆಯ ಟ್ಯಾಂಕರ್‌ನಿಂದ ನೀರು ಕೊಡುತ್ತಿರುವುದು.
ಕೋಲಾರದಲ್ಲಿ ಬೇಸಿಗೆ ಕಾರಣಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದ್ದು, ಆಜಾದ್‌ ನಗರ ಬಡಾವಣೆ ನಿವಾಸಿಗಳಿಗೆ ನಗರಸಭೆಯ ಟ್ಯಾಂಕರ್‌ನಿಂದ ನೀರು ಕೊಡುತ್ತಿರುವುದು.   

ಅಂಕಿ ಅಂಶ.....
* 30 ಚದರ ಕಿ.ಮೀ ನಗರದ ವಿಸ್ತಾರ
* 2 ಲಕ್ಷ ದಾಟಿದ ಜನಸಂಖ್ಯೆ
* 35 ವಾರ್ಡ್‌ಗಳು
* 352 ಕೊಳವೆ ಬಾವಿಗಳು

ಕೋಲಾರ: ನೆತ್ತಿ ಮೇಲೆ ಸುಡು ಬಿಸಿಲು... ಸೂರ್ಯನ ಪ್ರಖರತೆಗೆ ಕಾದ ಹೆಂಚಾಗಿರುವ ಇಳೆ... ಎಲ್ಲೆಲ್ಲೂ ಬಿಸಿಲ ಧಗೆ... ಜೀವಜಲಕ್ಕಾಗಿ ದಿನ ಬೆಳಗಾದರೆ ಕಾದಾಟ... ಖಾಲಿ ಬಿಂದಿಗೆಗಳೊಂದಿಗೆ ನಾರಿಯರ ಸೆಣಸಾಟ... ವರುಣ ದೇವನ ಅವಕೃಪೆಗೆ ತುತ್ತಾಗಿರುವ ನಗರದ ಚಿತ್ರಣವಿದು.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯದ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 2.70 ದಶಲಕ್ಷ ಲೀಟರ್‌ (ಎಂಎಲ್‌ಡಿ) ನೀರಿನ ಅಗತ್ಯವಿದೆ.

ADVERTISEMENT

ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ ಶುದ್ಧ ಕುಡಿಯುವ ನೀರು ಕೊಡಬೇಕು. ಆದರೆ, ನಗರದಲ್ಲಿ ಅರ್ಧಕ್ಕೂ ಕಡಿಮೆ ಅಂದರೆ 35 ಲೀಟರ್‌ ಮಾತ್ರ ನೀರು ಕೊಡಲಾಗುತ್ತಿದೆ.

ನಗರದಲ್ಲಿ ನಗರಸಭೆಗೆ ಸೇರಿದ 352 ಕೊಳವೆ ಬಾವಿಗಳಿದ್ದು, ಈ ಪೈಕಿ 216 ಸುಸ್ಥಿತಿಯಲ್ಲಿವೆ. 113 ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದ್ದು, ಜನರಿಗೆ ಜಲಕ್ಷಾಮದ ಬಿಸಿ ತಟ್ಟಲಾರಂಭಿಸಿದೆ. ಕೊಳವೆ ಬಾವಿಗಳ ಪಂಪ್‌, ಮೋಟರ್‌ ನಿರ್ವಹಣೆಯ ಗುತ್ತಿಗೆ ಅವಧಿ ಮುಗಿದು ತಿಂಗಳುಗಳೇ ಕಳೆದಿದ್ದು, ಟೆಂಡರ್‌ ನವೀಕರಿಸಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ 23 ಕೊಳವೆ ಬಾವಿಗಳ ಪಂಪ್‌ ಹಾಗೂ ಮೋಟರ್‌ ಕೆಟ್ಟಿದ್ದು, ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ.

ಕುಡಿಯಲು ಯೋಗ್ಯವಲ್ಲ: ಅಂತರ್ಜಲ ಮಟ್ಟ 1,50-0 ಅಡಿಗಿಂತಲೂ ಆಳಕ್ಕೆ ಕುಸಿದಿದ್ದು, ಇಷ್ಟು ಆಳದಿಂದ ತೆಗೆದ ನೀರು ವಿಷಕಾರಿ ಫ್ಲೋರೈಡ್‌ ಅಂಶದಿಂದ ಕೊಡಿರುತ್ತದೆ. ಹೀಗಾಗಿ ಈ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ. ಪ್ರಮುಖ ನೀರಿನ ಮೂಲವಾದ ಅಮ್ಮೇರಹಳ್ಳಿ ಕೆರೆಯಲ್ಲಿ ನೀರು ಬತ್ತಿರುವುದು ಸಮಸ್ಯೆಯನ್ನು ಗಂಭೀರವಾಗಿಸಿದೆ. ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಗರವಾಸಿಗಳು ರಸ್ತೆತಡೆ, ಧರಣಿ ಮಾಡುವುದು ಸಾಮಾನ್ಯವಾಗಿದೆ.

ಹೆಚ್ಚುವರಿ ಟ್ಯಾಂಕರ್‌: ನಗರಸಭೆಯು ನೀರಿನ ಸಮಸ್ಯಾತ್ಮಕ ವಾರ್ಡ್‌ಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಸುತ್ತಿದೆ. ಸುಮಾರು 12 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸದ್ಯ ನಗರಸಭೆಯ 9 ಟ್ಯಾಂಕರ್‌ಗಳಿವೆ. ಸಮಸ್ಯೆ ಗಂಭೀರವಾಗಿರುವ ಕಾರಣ ಹೆಚ್ಚುವರಿಯಾಗಿ 15 ಖಾಸಗಿ ಟ್ಯಾಂಕರ್‌ಗಳನ್ನು ಗುತ್ತಿಗೆಗೆ ಪಡೆದು ನೀರು ಕೊಡಲಾಗುತ್ತಿದೆ.

ಬೇಸಿಗೆ ಮುಗಿಯುವವರೆಗೆ 100 ದಿನಗಳ ಕಾಲ ನೀರು ಪೂರೈಸಲು ಖಾಸಗಿ ಟ್ಯಾಂಕರ್‌ ಮಾಲೀಕರೊಂದಿಗೆ ಗುತ್ತಿಗೆ ಕರಾರು ಮಾಡಿಕೊಳ್ಳಲಾಗಿದೆ. ಟ್ಯಾಂಕರ್‌ ಮಾಲೀಕರಿಗೆ ಪ್ರತಿ ಲೋಡ್‌ಗೆ ₹ 525 ದರ ನಿಗದಿಪಡಿಸಲಾಗಿದೆ. ಖಾಸಗಿ ಟ್ಯಾಂಕರ್‌ ಮಾಲೀಕರು ದಿನಕ್ಕೆ 4 ಲೋಡ್‌ ನೀರು ಪೂರೈಸುತ್ತಿದ್ದಾರೆ. ನೀರು ಸರಬರಾಜು ಪ್ರಕ್ರಿಯೆಲ್ಲಿನ ಅಕ್ರಮ ತಡೆಗಾಗಿ ಪ್ರತಿ ವಾಹನಕ್ಕೂ ಜಿಪಿಎಸ್‌ ಉಪಕರಣ ಅಳವಡಿಸಲಾಗಿದೆ.

ರೈತರಿಂದ ಖರೀದಿ: ನಗರಸಭೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ರೈತರ ಕೊಳವೆ ಬಾವಿಗಳಿಂದ ಪ್ರತಿ ಲೋಡ್‌ಗೆ ₹ 90 ಕೊಟ್ಟು ನೀರು ಖರೀದಿಸಲಾಗುತ್ತಿದೆ. ನಗರದಲ್ಲಿ 4 ಓವರ್‌ ಹೆಡ್‌ ಟ್ಯಾಂಕ್‌ಗಳಿದ್ದು, ಇವು ತಲಾ 1 ಲಕ್ಷ ಲೀಟರ್‌ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿವೆ. ಈ ಟ್ಯಾಂಕ್‌ಗಳಲ್ಲಿ ನೀರು ಶೇಖರಿಸಿಕೊಂಡು ಪೈಪ್‌ಲೈನ್‌ ವ್ಯವಸ್ಥೆ ಹೊಂದಿರುವ ಬಡಾವಣೆಗಳಿಗೆ ಪೂರೈಸಲಾಗುತ್ತಿದೆ.

ಆದರೂ ನಗರದ ನೀರಿನ ದಾಹ ಕಡಿಮೆಯಾಗುತ್ತಿಲ್ಲ. ನಗರವಾಸಿಗಳು ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುವಂತಾಗಿದೆ. ಒಂದು ಟ್ಯಾಂಕರ್‌ ಲೋಡ್‌ ನೀರಿನ ದರ ₹ 500 ಇದ್ದು, ಜನ ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ. ನೀರಿನ ಸಮಸ್ಯೆಯಿಂದ ರೋಸಿ ಹೋಗಿರುವ ಜನ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.