ADVERTISEMENT

ಎರಡು ದಿನಕ್ಕೊಮ್ಮೆ 3–4 ಬಿಂದಿಗೆ ನೀರು ;ತೊಂಗಲಕುಪ್ಪ ಗ್ರಾಮದಲ್ಲಿ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 4:06 IST
Last Updated 24 ಏಪ್ರಿಲ್ 2020, 4:06 IST
ಬೇತಮಂಗಲ ಸಮೀಪದ ಕ್ಯಾಸಂಬಳ್ಳಿ ಹೋಬಳಿಯ ತೊಂಗಲಕುಪ್ಪ ಗ್ರಾಮಸ್ಥರು ನೀರಿಗಾಗಿ ಖಾಸಗಿ ಕೊಳವೆ ಬಾವಿ ಬಳಿ ಕಾದು ನಿಂತಿರುವುದು
ಬೇತಮಂಗಲ ಸಮೀಪದ ಕ್ಯಾಸಂಬಳ್ಳಿ ಹೋಬಳಿಯ ತೊಂಗಲಕುಪ್ಪ ಗ್ರಾಮಸ್ಥರು ನೀರಿಗಾಗಿ ಖಾಸಗಿ ಕೊಳವೆ ಬಾವಿ ಬಳಿ ಕಾದು ನಿಂತಿರುವುದು   

ಬೇತಮಂಗಲ: ಕೆಜಿಎಫ್ ತಾಲ್ಲೂಕಿನ ಗ್ರಾಮೀಣ ಭಾಗದ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ಜನರು ನೀರಿಗಾಗಿ ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ.

ಕ್ಯಾಸಂಬಳ್ಳಿ ಹೋಬಳಿಯ ಕಂಗಾಡ್ಲಹಳ್ಳಿ ಗ್ರಾ.ಪಂ. ತೊಂಗಲಕುಪ್ಪ ಗ್ರಾಮದ ಜನರು ಕುಡಿಯುವ ನೀರಿಗಾಗಿ ದಿನಂಪ್ರತಿ ಪರದಾಡುತ್ತಾರೆ. ಗ್ರಾ.ಪಂ ವತಿಯಿಂದ ಎರಡು ದಿನಕ್ಕೆ ಒಂದು ಬಾರಿ 3-4 ಬಿಂದಿಗೆ ನೀರು ನೀಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ
ಕಾರಣವಾಗಿದೆ.

ಜಾನುವಾರು ಗೊಳು: ತೊಂಗಲಕುಪ್ಪ ಗ್ರಾಮದಲ್ಲಿ ಸುಮಾರು 140ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ರೈತರು ಹೆಚ್ಚಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳೂ ಇವೆ. ಬೇಸಿಗೆಯ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಾನುವಾರಗಳಿಗೂ ನೀರಿನ ಆಭಾವ ಉಂಟಾಗಿದೆ.

ADVERTISEMENT

ನೂತನ ಕೊಳವೆ ಬಾವಿಗೆ ಆಗ್ರಹ: ತೊಂಗಲಕುಪ್ಪ ಗ್ರಾಮದಲ್ಲಿ ಯಾವುದೇ ಸರ್ಕಾರಿ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಜಿ.ಪಂ ಸದಸ್ಯ ಜಯಪ್ರಕಾಶ್ ನಾಯ್ಡು ಹಾಗೂ ಶಾಸಕಿ ಎಂ.ರೂಪಕಲಾ ಶಶಿಧರ್ ಅವರ ಗಮನಕ್ಕೆ ತರಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಪಂಚಾಯಿತಿಯಿಂದ ಹೊಸ ಕೊಳವೆ ಬಾವಿ ಕೊರೆಸಲು ಅನುದಾನ ಇಲ್ಲ. ನೀರಿನ ಸಮಸ್ಯೆ ಬಗ್ಗೆ ಜಿ.ಪಂ, ಶಾಸಕರ ಗಮನಕ್ಕೆ ತರಲಾಗಿದೆ -ಸುಬ್ಬರೆಡ್ಡಿ, ಕಂಗಾಡ್ಲಹಳ್ಳಿ ಗ್ರಾ.ಪಂ ಅಧ್ಯಕ್ಷ

ತೊಂಗಲಕುಪ್ಪ ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಶೀಘ್ರವಾಗಿ ಕೊಳವೆ ಬಾವಿ ಕೊರೆಸಲಾಗುತ್ತದೆ -ಜಯಪ್ರಕಾಶ್ ನಾಯ್ಡು,ಜಿ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.