ADVERTISEMENT

ನೀರಿನ ಟ್ಯಾಂಕರ್‌ ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:49 IST
Last Updated 28 ಏಪ್ರಿಲ್ 2025, 13:49 IST

ಕೆಜಿಎಫ್‌: ನಗರದಲ್ಲಿ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕರ್‌ಗಳು ನಗರಸಭೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಟ್ಯಾಂಕ್‌ ಒಳಗೆ ಎಪೋಕ್ಸಿ ಲೇಪನ ಮಾಡಿಸಬೇಕು ಎಂದು ನಗರಸಭೆ ಆಯುಕ್ತರು ಟ್ಯಾಂಕರ್‌ ಮಾಲೀಕರಿಗೆ ಸೋಮವಾರ ಸೂಚನೆ ನೀಡಿದ್ದಾರೆ.

ನಗರದಲ್ಲಿರುವ ನೀರಿನ ಟ್ಯಾಂಕರ್‌ಗಳ ಅವ್ಯವಸ್ಥೆ ಬಗ್ಗೆ ಸೋಮವಾರ (ಏ.28) ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಗಮನಿಸಿದ ಆಯುಕ್ತ ಪವನ್‌ ಕುಮಾರ್‌, ಈ ಕ್ರಮ ಕೈಗೊಂಡಿದ್ದಾರೆ.

ಸರ್ಕಾರಿ ಆದೇಶದ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೀರು ಟ್ಯಾಂಕರ್‌ಗಳ ಮಾಲೀಕರು ತಮ್ಮ ಹೆಸರು, ವಿಳಾಸ, ವಾಹನಗಳ ವಿವರಗಳು, ಟ್ಯಾಂಕರ್‌ ಸಾಮರ್ಥ್ಯ, ಮಾದರಿ ಇತ್ಯಾದಿ ವಿವರಗಳನ್ನು ನಗರಸಭೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಸಿದ ಏಳು ದಿನಗಳೊಳಗೆ ಎಲ್ಲಾ ಟ್ಯಾಂಕರ್‌ಗಳು ಎಪೋಕ್ಷಿ ಲೇಪನ (ಕೋಟಿಂಗ್‌) ಮಾಡಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಟ್ಯಾಂಕರ್‌ ಗಳು ಸರಬರಾಜು ಮಾಡುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲನೆ ಮಾಡಲಾಗುತ್ತದೆ. ನೀರಿನ ಮಾಲಿನ್ಯಕ್ಕೆ ಸಂಬಂಧಿಸಿದ ಯಾವುದೇ ದೂರು ಬಂದರೂ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚನೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.