ADVERTISEMENT

ತಾರಾಕ್ಕ, ಶಶಿಕಲಾ, ಶೋಭಾಕ್ಕ ಎಲ್ಲಿ ಕಳೆದು ಹೋದರು?: ಪುಷ್ಪಾ ಅಮರನಾಥ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 5:06 IST
Last Updated 11 ಮಾರ್ಚ್ 2023, 5:06 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಕೋಲಾರ: ‘ಮಹಿಳೆಯ ಖಾಸಗಿತನವನ್ನು ಬಿಜೆಪಿಯವರು ಸಾರ್ವಜನಿಕವಾಗಿ ಹರಾಜು ಹಾಕುತ್ತಿದ್ದಾರೆ. ಕುಂಕುಮ‌ ಇಟ್ಟುಕೊಳ್ಳದ ಮಹಿಳೆಯನ್ನು ಗಂಡ ಇಲ್ಲವೇ ಎಂದು ಸಂಸದ ಎಸ್‌. ಮುನಿಸ್ವಾಮಿ ನಿಂದಿಸಿರುವುದು ಇದಕ್ಕೆ ಸಾಕ್ಷಿ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ‌ ಅಮರನಾಥ್ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಹಾಗೂ ಅದರ ನಾಯಕರದ್ದು ಮನುವಾದಿ ಸಂಸ್ಕೃತಿ. ಮಹಿಳೆ ಅಧಿಕಾರ ನಡೆಸಲು ಅನರ್ಹಳು ಎಂಬ ದಬ್ಬಾಳಿಕೆಯ ಮನಸ್ಥಿತಿ ಅವರದ್ದು. ನಿಂದನೆ ಬಗ್ಗೆ ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರು ಮಾತನಾಡುತ್ತಿಲ್ಲ. ತಾರಾಕ್ಕ, ಶಶಿಕಲಾ, ಶೋಭಾಕ್ಕ ಎಲ್ಲಿ ಕಳೆದು ಹೋದರೋ ಗೊತ್ತಿಲ್ಲ’ ಎಂದರು.

‘ಬೊಟ್ಟು ಇಟ್ಟುಕೊಳ್ಳುವುದು ಬಿಡುವುದು ಹೆಣ್ಣು ಮಕ್ಕಳ ಹಕ್ಕು. ಜವಾಬ್ದಾರಿಯುತ ಸಂಸದ ನಡೆದುಕೊಳ್ಳುವ ರೀತಿಯೇ ಇದು? ಇಂದು ಬೊಟ್ಟು ಇಟ್ಟುಕೊಂಡಿಲ್ಲ ಎಂದು ಕೇಳಿದವರು ನಾಳೆ ಮತ್ತೊಂದು ಪ್ರಶ್ನೆ ಮಾಡಬಹುದು. ವೈಯಕ್ತಿಕವಾಗಿ ಹೆಣ್ಣು ಮಕ್ಕಳ ವಿಚಾರದ ಬಗ್ಗೆ ಟೀಕಿಸುವವರಿಗೆ ಸಂವೇದನಾಶೀಲತೆಯ ಕೊರತೆ ಇದೆ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿಯವರ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ಇರುತ್ತಾರೆ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿಲ್ಲವೇ’ ಎಂದು ಪ್ರಶ್ನಿಸಿದರು.

‘ಪಕ್ಷದ ಮುಖಂಡರ ಇಂಥ ವರ್ತನೆಯನ್ನು ಖಂಡಿಸಬೇಕಾದ ಬಿಜೆಪಿ ಅಧ್ಯಕ್ಷರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಇನ್ನು ಈ ವಿಚಾರದ ಬಗ್ಗೆ ಅವರು ಏನು ಕ್ರಮ ಕೈಗೊಳ್ಳುತ್ತಾರೆ? ಮಹಿಳಾ ವಿರೋಧಿ ಬಿಜೆಪಿ ಬೇಕೇ ಎಂಬುದನ್ನು ಮತದಾರರೇ ತೀರ್ಮಾನಿಸಬೇಕು’ ಎಂದರು.

‘ತಾಕತ್ತು, ಧಮ್‌ ಇದ್ದರೆ‌ ಆ ಮಹಿಳೆಯ ಬಳಿ ಮುನಿಸ್ವಾಮಿ ಕ್ಷಮೆಯಾಚಿಸಬೇಕು. ಇಲ್ಲವೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.