ಬಂಗಾರಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಹಂದಿ ದಾಳಿಗೆ ನಾಶವಾಗುತ್ತಿದ್ದು, ಹಗಲು–ರಾತ್ರಿ ರೈತರು ತಮ್ಮ ಬೆಳೆಗಳಿಗೆ ಕಾವಲು ಕಾಯುವಂತಾಗಿದೆ. ಆದರೂ, ಬೆಳೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅರಣ್ಯ ಇಲಾಖೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ತಾಲ್ಲೂಕಿನಾದ್ಯಂತ ಕಾಡು ಹಂದಿಗಳು ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗಿ, ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿವೆ. ಹಾಗಾಗಿ ಕೆಲವು ರೈತರು ಕೃಷಿಯಿಂದ ವಿಮುಖರಾಗುವತ್ತ ಮುಖ ಮಾಡುತ್ತಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ತಮ್ಮ ಕಣ್ಣ ಮುಂದೆಯೇ ನಾಶವಾಗುತ್ತಿರುವುದು ಅನ್ನದಾತರನ್ನು ಕಂಗಾಲಾಗುವಬಂತೆ ಮಾಡಿದೆ. ಇದು ಕೇವಲ ರೈತರನ್ನು ಆರ್ಥಿಕ ಸಂಕಷ್ಟಕಕ್ಕೆ ದೂಡುತ್ತಿಲ್ಲ. ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದರು.
ಮುಸುಕಿನ ಜೋಳ, ಟೊಮೊಟೊ, ಆಲೂಗಡ್ಡೆ, ಕಬ್ಬು, ಭತ್ತ, ಬಾಳೆ ಮತ್ತು ಇತರ ತರಕಾರಿ ಬೆಳೆಗಳನ್ನು ಹಂದಿಗಳು ತಿನ್ನುವುದಲ್ಲದೆ, ಗಿಡಗಳನ್ನು ತುಳಿದು ನಾಶಪಡಿಸುತ್ತವೆ. ಜೊತೆಗೆ ಭೂಮಿಯನ್ನು ಅಗೆದು ಹಾನಿ ಉಂಟು ಮಾಡುತ್ತವೆ.
ಹಂದಿಗಳ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಬೆಳೆ ಹಾನಿಯಾದಾಗ ಸೂಕ್ತ ಸಮಯಕ್ಕೆ ಅಧಿಕಾರಿಗಳು ಭೇಟಿ ನೀಡುವುದಿಲ್ಲ. ಬೆಳೆ ನಾಶವಾದರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ, ಪರಿಹಾರ ನೀಡುತ್ತಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಹಂದಿಗಳನ್ನು ಕೊಲ್ಲಲು ಅವಕಾಶವಿಲ್ಲ. ಹಾಗಾಗಿ ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.
ಹಂದಿಗಳ ಹಾವಳಿಯಿಂದ ಬೇಸತ್ತ ರೈತರು ಬೆಳೆ ಹಾನಿ ಮಾಡುವ ಹಂದಿಗಳನ್ನು ಕೊಲ್ಲಲು ಅನುಮತಿ ನೀಡಬೇಕು ಅಥವಾ ಸರ್ಕಾರವೇ ಹಂದಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವೆಡೆ ರೈತರು ತಮ್ಮ ಜಮೀನುಗಳಿಗೆ ತಂತಿ ಬೇಲಿ ಅಳವಡಿಸಿದರೂ, ಹಂದಿಗಳು ಅದನ್ನು ಮುರಿದು ಒಳನುಗ್ಗುತ್ತಿವೆ. ರಾತ್ರಿಯಿಡಿ ಹೊಲ ಕಾಯುವುದು ರೈತರಿಗೆ ಹೆಚ್ಚುವರಿ ಹೊರೆಯಾಗಿದೆ. ಜೊತೆಗೆ ಹಂದಿಗಳ ದಾಳಿಯಿಂದ ಪ್ರಾಣಭಯವೂ ಎದುರಾಗಿದೆ. ಹಾಗಾಗಿ ಇದರಿಂದ ಬೇಸತ್ತ ಕೃಷಿಕರು ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಬೆಳೆ ಪರಿಹಾರ ನೀಡಬೇಕು. ಜೊತೆಗೆ ಹಂದಿ ಉಪಟಳವನ್ನು ತಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹಂದಿಗಳಿಂದ ಬೆಳೆ ನಾಶವಾದರೆ ಪರಿಹಾರ ನೀಡಲು ಸರ್ಕಾರದ ಆದೇಶವಿಲ್ಲ. ಹಂದಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುವುದು.ಶ್ರೀಲಕ್ಷ್ಮಿ ವಲಯ ಅರಣ್ಯಾಧಿಕಾರಿ ಬಂಗಾರಪೇಟೆ
ಹಂದಿಗಳಿಂದಾಗುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಲು. ಜೊತೆಗೆ ಕೇರಳ ಮಾದರಿಯಲ್ಲಿ ಹಂದಿ ಭೇಟೆಗೆ ಅನುಮತಿ ನೀಡಲು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸುತ್ತೇನೆ.ಎಸ್.ಎನ್.ನಾರಾಯಣಸ್ವಾಮಿ ಶಾಸಕರು ಬಂಗಾರಪೇಟೆ
ಕಾಡು ಹಂದಿಗಳ ಉಪಟಳದಿಂದ ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ಇದರಿಂದ ರೈತರ ಶ್ರಮ ವ್ಯರ್ಥವಾಗುತ್ತಿದೆ. ಜೊತೆಗೆ ಅವರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು, ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ.
ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ
ಅರಣ್ಯ ಪ್ರದೇಶಗಳಿಗೆ ಹತ್ತಿರವಿರುವ ಗ್ರಾಮಗಳ ರೈತರ ಜಮೀನುಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಫಸಲಿನ ಹಂತದಲ್ಲಿರುವ ಬೆಳೆಯನ್ನು ಹಂದಿಗಳು ತಿಂದು ನಾಶಪಡಿಸುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪ ಪ್ರಮಾಣದ ಬೆಳೆ ಉಳಿಸಿಕೊಳ್ಳಲು ಹಗಲು-ರಾತ್ರಿ ಹೊಲಗಳಲ್ಲಿ ಕಾಯುವಂತಾಗಿದೆ. ಹಾಗಾಗಿ ಅರಣ್ಯ ಇಲಾಖೆ ಹಂದಿಗಳ ಕಾಟದಿಂದ ರೈತರಿಗೆ ಮುಕ್ತಿ ನೀಡಿ.
ಕಾಶಿನಾಥ್ ರಾವ್ ಶಿಂಧೆ, ಚತ್ತಗುಟ್ಲಹಳ್ಳಿ, ಯುವ ರೈತ
ಕಾಡಂಚಿನ ಜಮೀನಿಗೆ ಪ್ರಾಣಿಗಳು ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಆನೆ ದಾಳಿಯಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆ ಸ್ವಲ್ಪ ಪರಿಹಾರವನ್ನಾದರೂ ನೀಡುತ್ತದೆ. ಆದರೆ, ಹಂದಿಗಳ ದಾಳಿಗೆ ಯಾವುದೇ ರೀತಿಯ ಬೆಳೆ ನಷ್ಟ ಪರಿಹಾರ ನೀಡುತ್ತಿಲ್ಲ. ಇದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ.
ನಾಗರಾಜ್, ಸಕ್ಕನಹಳ್ಳಿ
ಕಾಡುಹಂದಿಗಳು ತಮ್ಮ ಆಹಾರಕ್ಕಾಗಿ ರೈತರ ಹೊಲಗಳಿಗೆ ನುಗ್ಗಿ, ಬೆಳೆ ನಾಶಪಡಿಸುತ್ತಿವೆ. ಹಾಗಾಗಿ ಇಲಾಖೆಯವರು ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವಂತಹ ಗಿಡಗಳನ್ನು ಬೆಳಸಿ.
ರಾಜಾರೆಡ್ಡಿ, ಮಾಜಿ ಎಪಿಎಂಸಿ ನಿರ್ದೇಶಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.