ADVERTISEMENT

ತನಿಖೆ ಮಾಡಿಸುತ್ತೇನೆ: ಸಂಸದ ಮುನಿಸ್ವಾಮಿ

ಡಿಸಿಸಿ ಬ್ಯಾಂಕ್‌– ಕೋಚಿಮುಲ್‌ನಲ್ಲಿ ಭಾರಿ ಅವ್ಯವಹಾರ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 14:31 IST
Last Updated 18 ಡಿಸೆಂಬರ್ 2019, 14:31 IST

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯು ಸಾಕಷ್ಟು ಅವ್ಯವಹಾರ ನಡೆಸಿದ್ದು, ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತಂದು ತನಿಖೆ ಮಾಡಿಸುತ್ತೇನೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಪರವಾಗಿದ್ದೇನೆ. ಈ ಎರಡೂ ಸಂಸ್ಥೆಗಳು ರೈತರ ಜೀವನಾಡಿಯಾಗಿ ಕೆಲಸ ಮಾಡಬೇಕೇ ಹೊರತು ರಕ್ತ ಹೀರಬಾರದು’ ಎಂದು ಗುಡುಗಿದರು.

‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬರದ ನಡುವೆಯೂ ಕಷ್ಟಪಟ್ಟು ಹಾಲು ಉತ್ಪಾದಿಸಿದರೆ ಕೋಚಿಮುಲ್‌ನಲ್ಲಿ 60 ಸಾವಿರ ಟೆಟ್ರಾ ಪ್ಯಾಕ್‌ನಷ್ಟು ಹಾಲು ಕೆಟ್ಟು ಹೋಗಿದೆ. ಹಾಲು ಒಕ್ಕೂಟದಲ್ಲಿ ನಿಯಮ ಉಲ್ಲಂಘಿಸಿ ಸಿಬ್ಬಂದಿ ನೇಮಕಾತಿ ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ನನ್ನ ಬಳಿಯಿವೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ’ ಎಂದರು.

ADVERTISEMENT

‘ನಾನು ಡಿಸಿಸಿ ಬ್ಯಾಂಕ್ ವಿರೋಧಿಯಲ್ಲ. ಬ್ಯಾಂಕ್‌ನ ಅಧ್ಯಕ್ಷ ಗೋವಿಂದಗೌಡ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವುದನ್ನು ವಿರೋಧಿಸುವುದಿಲ್ಲ. ಆದರೆ, ಪಕ್ಷಾತೀತವಾಗಿ ಸಾಲ ಕೊಡಬೇಕು ಮತ್ತು ಯಾವುದೇ ತಾರತಮ್ಯ ಮಾಡಬಾರದು. ಫಲಾನುಭವಿಗಳ ಆಯ್ಕೆ ಲಾಟರಿ ಮೂಲಕ ನಡೆಯಬೇಕು. ವಿಧಾನಸಭೆ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರ ಓಲೈಕೆಗಾಗಿ ಕೆಜಿಎಫ್‌ನಲ್ಲಿ ಸಾಲ ನೀಡಲಾಗಿದೆ’ ಎಂದು ಆರೋಪಿಸಿದರು.

ಸೂಪರ್‌ ಸೀಡ್‌: ‘ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತೇನೆ. ಮಹಿಳೆಯರನ್ನು ಎತ್ತಿಕಟ್ಟಿ ದಂಗೆ ಎಬ್ಬಿಸುವ ದಮಕಿ ಹಾಕಿದರೆ ಹೆದರುವುದಿಲ್ಲ. ನಾನೂ ಸಂಘಟನೆಯಿಂದಲೇ ಬಂದವನು. ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರವಿದೆ. ಅಕ್ರಮಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿಸಲು ಹೋರಾಟ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಹಲವು ವರ್ಷಗಳ ನಂತರ ಕೋಲಾರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷೇತರ ಸದಸ್ಯರು ನಮ್ಮ ಸಂಪರ್ಕದಲ್ಲಿದ್ದು, ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರೇ ಅಧ್ಯಕ್ಷರಾಗಿದ್ದಾರೆ. ಒಂದೇ ಪಕ್ಷದ ಸದಸ್ಯರ ಬೆಂಬಲದಿಂದ ಅವರು ಅಧ್ಯಕ್ಷರಾಗಿಲ್ಲ. ಬಿಜೆಪಿ ಸದಸ್ಯರು ಸಹ ಅವರನ್ನು ಬೆಂಬಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದರು.

‘ರಾಜ್ಯಕ್ಕೆ ಮತ್ತೊಬ್ಬ ಉಪ ಮುಖ್ಯಮಂತ್ರಿಯ ಅವಶ್ಯಕತೆಯಿದ್ದರೆ ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೆ. ಆ ಸ್ಥಾನಕ್ಕೆ ವ್ಯಕ್ತಿಯನ್ನು ಗುರುತಿಸುವಷ್ಟು ದೊಡ್ಡವನಲ್ಲ. ಕೆಲ ಸಂಘಟನೆಗಳು ದೇಶದಲ್ಲಿ ಶಾಂತಿ ಕದಡುತ್ತಿವೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಗುರುತಿಸಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನವನ್ನು ಮುಸ್ಲಿಂ ರಾಷ್ಟ್ರಗಳೆಂದು ಕರೆಯಲಾಗುತ್ತದೆ. ದೇಶದ ಪರ ಯೋಜನೆ ಜಾರಿ ಮಾಡುವಾಗ ವಿರೋಧ ಸಹಜ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.