ಬೈರತಿ ಸುರೇಶ್
ಕೋಲಾರ: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬೈರತಿ ಸುರೇಶ್ ಅವರನ್ನು ಬದಲಾಯಿಸಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಲ್ಲಿ ಕಾಂಗ್ರೆಸ್ ಶಾಸಕರಾದ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಕೆಜಿಎಫ್‌ನ ರೂಪಕಲಾ ಶಶಿಧರ್ ಆಗ್ರಹಿಸಿರುವುದು ಗೊತ್ತಾಗಿದೆ.
ಉಸ್ತುವಾರಿ ವಿರುದ್ಧ ಬಹಳ ದಿನಗಳಿಂದ ಅಸಮಾಧಾನಗೊಂಡಿದ್ದ ಈ ಇಬ್ಬರು ಶಾಸಕರು, ಈ ಭೇಟಿ ವೇಳೆ ಕೋಲಾರ ಕಾಂಗ್ರೆಸ್‌ನಲ್ಲಿ ನಡೆದಿರುವ ಗುಂಪುಗಾರಿಕೆ, ಬಣ ರಾಜಕೀಯದ ಬಗ್ಗೆ ದೂರಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ನಿಷ್ಠಾವಂತರನ್ನು ಕಡೆಗಣಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ತಾರತಮ್ಯ ಮಾಡುತ್ತಿದ್ದು, ತಮ್ಮ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಅವರು ಸುರ್ಜೇವಾಲಾ ಎದುರು ಅಸಮಾಧಾನ ತೋಡಿಕೊಂಡಿದ್ದಾರೆ. ಕೆಲವು ಸಚಿವರು ‘ನಾ ನಿನಗೆ, ನೀ ನನಗೆ’ ಎಂಬಂತೆ ವರ್ತಿಸುತ್ತಿದ್ದಾರೆ. ಅದರಿಂದಲೇ ಸಮಸ್ಯೆಯಾಗಿದೆ ಎಂದೂ ದೂರಿದ್ದಾರೆ.
ಉಸ್ತುವಾರಿ ಭೇಟಿ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಾರಾಯಣಸ್ವಾಮಿ, ‘ಸಚಿವರ ಕಾರ್ಯವೈಖರಿ ಬಗ್ಗೆ ಹೇಳಿದ್ದೇನೆ. ಕೋಲಾರ ಕಾಂಗ್ರೆಸ್‌ನ ಕೆಲ ಶಾಸಕರು ನಮ್ಮನ್ನು ಹೊರಗಿಟ್ಟು ಗುಂಪುಗಾರಿಕೆ ಮಾಡುತ್ತಿದ್ದಾರೆ. ಕೋಮುಲ್ ಕ್ಷೇತ್ರ ಪುನರ್‌ವಿಂಗಡಣೆಯನ್ನು ಬೇಕಾಬಿಟ್ಟಿಯಾಗಿ, ಇಷ್ಟಬಂದಂತೆ ಮಾಡಿಕೊಂಡಿದ್ದಾರೆ. ಬಂಗಾರಪೇಟೆ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಆ ಕ್ಷೇತ್ರದ ಶಾಸಕನಾಗಿರುವ ನನ್ನನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ವಾಗ್ದಾಳಿ ನಡೆಸಿದ್ದರು.
ರೂಪಕಲಾ ಶಶಿಧರ್ ಮಾತನಾಡಿ, ‘ಪಕ್ಷದ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿತು. ಸುರ್ಜೇವಾಲಾ ಮುಂದೆ ನಮ್ಮ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಯಾವ ವಿಚಾರವನ್ನು ಎಲ್ಲೆಲ್ಲಿ ಮಾತನಾಡಬೇಕು ಅಲ್ಲೇ ಮಾತನಾಡಬೇಕು. ಶಾಸಕರಿಗೆ ಸಮಸ್ಯೆಗಳಿಲ್ಲವೆಂದು ಹೇಳುವುದಿಲ್ಲ. ಅದನ್ನು ಸರಿಪಡಿಸಬೇಕು’ ಎಂದಿದ್ದರು.
ಬೈರತಿ ಸುರೇಶ್ ಅಲ್ಲದೇ; ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ವಿರುದ್ಧವೂ ದೂರು ನೀಡಿದ್ದಾರೆ. ಉಸ್ತುವಾರಿ ಸಚಿವರ ಬದಲಾಯಿಸಿ ಗುಂಪುಗಾರಿಕೆ ಸರಿಪಡಿಸಬೇಕೆಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಸುರ್ಜೇವಾಲಾ ರಾಜ್ಯ ರಾಜಕಾರಣದ ವಿಚಾರವಲ್ಲದೇ, ಕೋಲಾರ ಜಿಲ್ಲೆಯ ವಿಚಾರವಾಗಿ ಸಂಪೂರ್ಣ ಮಾಹಿತಿ ಕೇಳಿದ್ದಾರೆ.
ಇತ್ತ ನಂಜೇಗೌಡ ಕೂಡ ಸುರ್ಜೇವಾಲಾ ಅವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂದು ನೇರವಾಗಿ ನಾರಾಯಣಸ್ವಾಮಿ ವಿರುದ್ಧ ಗುಡುಗಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡುವಾಗಲೂ, ‘ಹಿಂದೆ ನಾರಾಯಣಸ್ವಾಮಿ ಯಾವ ಪಕ್ಷದಲ್ಲಿ ಇದ್ದರೋ ನನಗೆ ಗೊತ್ತಿಲ್ಲ. ನನ್ನ ತಾತ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ನಾನು ಮಂಡಲ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದೆ. ಹೀಗಾಗಿ, ನನ್ನ ಮೂಲ ಕೂಡ ಕಾಂಗ್ರೆಸ್’ ಎಂದಿದ್ದಾರೆ.
ಆದರೆ, ಉಸ್ತುವಾರಿ ಸಚಿವ ಬೈರತಿ ಸುರೇಶ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಂಜೇಗೌಡ ಹೇಳಿದ್ದಾರೆ.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಕೂಡ ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದು, ‘ಸರ್ಕಾರದ ಎಲ್ಲಾ ಸಚಿವರು ನನಗೆ ಸಹಕಾರ ನೀಡಿದ್ದಾರೆ. ಹೀಗಾಗಿ, ಯಾವುದೇ ದೂರುಗಳು ಇಲ್ಲ’ ಎಂದಿದ್ದಾರೆ.
ಈಗಾಗಲೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿ ಹಲವಾರು ವರ್ಷಗಳಿಂದ ಬಿಕ್ಕಟ್ಟು ಬಿಗಡಾಯಿಸಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದೀಗ ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆ ವಿಚಾರದಲ್ಲಿ ಬಿಗಡಾಯಿಸಿದೆ. ಮುಂದೆ ನಗರಸಭೆ, ಪುರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೂ ವಿಸ್ತರಿಸುವ ಸುಳಿವು ನೀಡಿದೆ.
ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಿರುವ ಬೈರತಿ ಸುರೇಶ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎನ್ನಲಾಗಿದೆ. ಎರಡು ತಿಂಗಳಿಗೊಮ್ಮೆ ಬರುವ ಜಿಲ್ಲಾ ಉಸ್ತುವರಿ ಸಚಿವರು ಬೇಡವೆಂದು ರೈತ ಸಂಘಟನೆಗಳೂ ಪಟ್ಟು ಹಿಡಿದಿವೆ, ಪತ್ರ ಕೂಡ ಬರೆದಿವೆ.
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ
‘ಸಚಿವರಾದ ಬೈರತಿ ಸುರೇಶ್ ಹಾಗೂ ಡಾ.ಎಂ.ಸಿ.ಸುಧಾಕರ್ ಆಪ್ತ ಸ್ನೇಹಿತರು. ಸುಧಾಕರ್ ಕೋಲಾರ ರಾಜಕೀಯಕ್ಕೆ ಪ್ರವೇಶ ಮಾಡಿದ ಕಾರಣ ಈ ಗೊಂದಲ ಉಂಟಾಗಿದೆ. ರಾಜಕಾರಣಕ್ಕಿಂತ ಸಂಬಂಧಗಳ ಬೆಲೆ ಹೆಚ್ಚಾಗಿದೆ. ಸಚಿವರಾದ ಕೃಷ್ಣಬೈರೇಗೌಡ ಸುಧಾಕರ್ ಹಾಗೂ ಶಾಸಕ ನಂಜೇಗೌಡ ಮೂವರೂ ರಕ್ತ ಸಂಬಂಧಿಗಳು. ಉಸ್ತುವಾರಿ ಸಚಿವರು ಬೈರತಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದ್ದಾರೆ. ಸಚಿವರ ಅಸಹಕಾರದ ಬಗ್ಗೆ ಸರ್ಜೇವಾಲಾ ಅವರಲ್ಲಿ ಹೇಳಿದ್ದೇನೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ. ‘ಮಾಲೂರು ಶಾಸಕ ನಂಜೇಗೌಡ ಏನು ಹುಲಿಯೇ? ಸಿಂಹವೇ? ಅವರ ಬಳಿ ಕ್ರಷರ್ ಇದೆ ಎಂದು ಹೆದರಬೇಕೇ? ಕೋಚಿಮುಲ್‌ನಲ್ಲಿ ನಾನೇನು ಹಗರಣ ಮಾಡಿದ್ದೇನೆಯೇ? ನಂಜೇಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದವರು. ನಾನು ಹುಟ್ಟಾ ಕಾಂಗ್ರೆಸ್ಸಿಗ’ ಎಂದು ಅವರು ಸುರ್ಜೇವಾಲಾ ಭೇಟಿ ಬಳಿಕ ಹೇಳಿದ್ದರು.
ಅವರ ಮುಂದೆ ಯಾರೂ ಬೆಳೆಯಬಾರದೇ?
ಜಿಲ್ಲೆಯ ಘಟಬಂಧನ್ ವಿರುದ್ಧ ಈಚೆಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ‘ರಾಜಕೀಯ ಅಸೂಯೆ ದ್ವೇಷ ಏಕೆ? ತಮ್ಮ ಮುಂದೆ ಯಾರೂ ಬೆಳೆಯಬಾರದೇ’ ಎಂದು ಪ್ರಶ್ನಿಸಿದ್ದಾರೆ. ‘ಕೆಲವರು ಅಸೂಯೆ ದ್ವೇಷ ಸಾಧಿಸುತ್ತಿದ್ದಾರೆ. ಸಹಕಾರ ಸಂಸ್ಥೆ ಕಟ್ಟಿ ಬೆಳೆಸುವವರು ನಾಯಕರು. ಕಟ್ಟಿದ ಸಂಸ್ಥೆಗಳನ್ನು ನೆಲಕಚ್ಚುವಂತೆ ಮಾಡಿ ಅಹಂಕಾರ ಮೆರೆಯುವುದು ನಾಯಕರ ಲಕ್ಷಣವಲ್ಲ’ ಎಂದು ಗರಂ ಆಗಿದ್ದಾರೆ.
ಎಸ್‌ಎನ್ಎನ್ ಪಕ್ಷ ವಿರೋಧಿ ಚಟುವಟಿಕೆ: ಕೆವೈಎನ್
‘ನಾನು ಯಾರ ಬಗ್ಗೆಯೂ ಚಾಡಿ ಹೇಳಿಲ್ಲ. ತಲೆಕೆಟ್ಟವರ ರೀತಿ ಮಾತನಾಡುವ ನಾರಾಯಣಸ್ವಾಮಿ ದೂರು ನೀಡಿರಬಹುದು. ಕೋಮುಲ್ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ನನ್ನ ಕ್ಷೇತ್ರಕ್ಕೆ ಬಂದು ನನ್ನ ವಿರೋಧಿಗಳ ಜೊತೆ ಚರ್ಚಿಸಿದ್ದಾರೆ. ಪಕ್ಷದ ವಿರುದ್ಧ ಯಾರು ಹೋಗುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಿ’ ಎಂದು ನಂಜೇಗೌಡ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.