ADVERTISEMENT

ವಿಸ್ಟ್ರಾನ್‌ ಕಂಪನಿ ಪ್ರಕರಣ: ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 16:45 IST
Last Updated 13 ಡಿಸೆಂಬರ್ 2020, 16:45 IST
   

ಕೋಲಾರ: ವಿಸ್ಟ್ರಾನ್‌ ಕಂಪನಿಯಲ್ಲಿ ಕಾರ್ಮಿಕ ಕಾನೂನುಗಳ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಸಿಐಟಿಯು ಮನವಿ ಮಾಡಿದೆ.

ಪ್ರತಿಷ್ಠಿತ ಆ್ಯಪಲ್‌ ಕಂಪನಿಗೆ ಐಫೋನ್‌ ಉತ್ಪಾದಿಸಿ ಕೊಡುವ ವಿಸ್ಟ್ರಾನ್ ಕಂಪನಿಯು ಜಿಲ್ಲೆಯಲ್ಲಿ 10 ಸಾವಿರ ಮಂದಿಗೆ ಉದ್ಯೋಗಾವಕಾಶ ನೀಡಿದೆ. ಕಂಪನಿ ಆಡಳಿತ ಮಂಡಳಿಯು ಇದನ್ನೇ ನೆಪ ಮಾಡಿಕೊಂಡು ಕಾರ್ಮಿಕರನ್ನು ಅಮಾನವೀಯ ಶೋಷಿಸಿರುವುದು ಸರಿಯಲ್ಲ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಟ್ರಾನ್‌ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ವೇತನ ನಿಗದಿಪಡಿಸಲಾಗಿದೆ. ಜತೆಗೆ ದುಡಿಮೆಯ ನಿಯಮ ಉಲ್ಲಂಘಿಸಿ ಹೆಚ್ಚಿನ ಅವಧಿವರೆಗೆ ಕೆಲಸ ಮಾಡಿಸಲಾಗುತ್ತಿತ್ತು. ಕಂಪನಿಯು ಕಾರ್ಮಿಕ ಕಾನೂನಿನ ಪ್ರಕಾರ ವೇತನ ಮತ್ತು ಇತರೆ ಸವಲತ್ತು ನೀಡದಿದ್ದರೂ ಕಾರ್ಮಿಕ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ADVERTISEMENT

ಕಡಿಮೆ ವೇತನ, ಕಡ್ಡಾಯವಾಗಿ 12 ತಾಸು ಕೆಲಸ ಮಾಡುವಂತೆ ಒತ್ತಾಯ, ಹೆಚ್ಚುವರಿ ಕೆಲಸಕ್ಕೆ 2 ಪಟ್ಟು ವೇತನ ನೀಡದೆ ಇರುವುದು, ಸಕಾಲಕ್ಕೆ ವೇತನ ಪಾವತಿಸದಿರುವುದು, ಮಹಿಳೆಯರನ್ನು ರಾತ್ರಿ ಪಾಳಿಯ ಕೆಲಸಕ್ಕೆ ನಿಯೋಜಿಸಿರುವುದು ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂಪನಿಯಲ್ಲಿ ನಡೆದ ಘಟನೆಗೆ ಅಧಿಕಾರಿಗಳು ಹಾಗೂ ಸರ್ಕಾರವೇ ನೇರ ಹೊಣೆ. ಕಂಪನಿಯಲ್ಲಿರುವ ಎಲ್ಲಾ ನೌಕರರನ್ನು ಕಾಯಂಗೊಳಿಸಬೇಕು. ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.