ADVERTISEMENT

ಮಹಿಳಾ ಸಂಘ: ವಹಿವಾಟು ಪಾರದರ್ಶವಾಗಿರಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:12 IST
Last Updated 7 ಫೆಬ್ರುವರಿ 2022, 15:12 IST
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಸೋಮವಾರ ಕಾರಂಜಿಕಟ್ಟೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಚಾಲನೆ ನೀಡಿದರು
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಸೋಮವಾರ ಕಾರಂಜಿಕಟ್ಟೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಚಾಲನೆ ನೀಡಿದರು   

ಕೋಲಾರ: ‘ಮಹಿಳೆಯರು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಆಡಳಿತವನ್ನು ತಿಳಿಯಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡುತ್ತೇವೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.

ನಗರದ ಕಾರಂಜಿಕಟ್ಟೆಯಲ್ಲಿ ಸೋಮವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ‘ಮಹಿಳಾ ಸ್ವಸಹಾಯ ಸಹಕಾರ ಸಂಘಗಳಲ್ಲಿನ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘಗಳಲ್ಲಿ ಹಣಕಾಸು ವಹಿವಾಟು ಪಾರದರ್ಶಕವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಂಘದಲ್ಲಿ ಹಣ ದುರ್ಬಳಕೆಗೆ ಅವಕಾಶ ನೀಡಬಾರದು. ಕಾಲಕಾಲಕ್ಕೆ ಸಭೆ ನಡೆಸಿ ಹಣಕಾಸಿನ ದಾಖಲೆಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಆದಾಯ ಸೋರಿಕೆಯಾಗದಂತೆ ಎಚ್ಚರ ವಹಿಸಬೇಕು. ಸಂಘದ ಆಡಳಿತ ಮಂಡಳಿಯಲ್ಲಿ ಆರ್ಥಿಕ ಶಿಸ್ತು ಇರಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಕೋಚಿಮುಲ್ ಮತ್ತು ಕೆಎಂಎಫ್‍ನಿಂದ ₹ 7.50 ಲಕ್ಷ ಕಟ್ಟಡ ಅನುದಾನ ನೀಡಲಾಗುತ್ತದೆ. ₹ 3.50 ಲಕ್ಷ ವೆಚ್ಚದ ಸಮೂಹ ಹಾಲು ಕರೆಯುವ ಯಂತ್ರ ಒದಗಿಸಲಾಗುತ್ತದೆ. ಸಂಜೀವಿನಿ ಮತ್ತು ಕ್ಷೀರ ಸಂಜೀವಿನಿ ಯೋಜನೆಯಲ್ಲಿ ₹ 3.50 ಲಕ್ಷ ಹಾಗೂ ಉಚಿತವಾಗಿ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಒಕ್ಕೂಟದ ವ್ಯಾಪ್ತಿಯ ಸಂಘಗಳಲ್ಲಿ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಲಾಗಿದೆ. ಜತೆಗೆ ಹಾಲಿನ ಕಲಬೆರಕೆ ತಡೆಗೆ ಎಚ್ಚರ ವಹಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಒಕ್ಕೂಟದ ವಿವಿಧ ಯೋಜನೆಗಳ ಮೂಲಕ ಸಂಘಗಳ ಬಲವರ್ಧನೆಗೆ ಶ್ರಮಿಸುತ್ತೇವೆ. ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘಗಳು ಹೆಚ್ಚು ಲಾಭ ಪಡೆಯುವಂತಾಗಬೇಕು’ ಎಂದು ಕೋಚಿಮುಲ್‌ ನಿರ್ದೇಶಕಿ ಆರ್‌.ಕಾಂತಮ್ಮ ಆಶಿಸಿದರು.

ಕೋಚಿಮುಲ್ ಉಪ ವ್ಯವಸ್ಥಾಪಕ ಎಚ್‌.ಮಹೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕ ಸೋಮಣ್ಣ, ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ನಗರಸಭೆ ಸದಸ್ಯರಾದ ಕೆ.ಲಕ್ಷ್ಮೀದೇವಮ್ಮ, ಆರ್‌.ಗುಣಶೇಖರ್, ಕಾರಂಜಿಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಅಮರಾವತಿ, ಕಾರ್ಯದರ್ಶಿ ರಾಣಾ ಫಿರ್ದೋಸ್, ಕೋಚಿಮುಲ್‌ ವಿಸ್ತಾರಣಾಧಿಕಾರಿ ನಾಗಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.