ADVERTISEMENT

ಜನರ ಸಮಸ್ಯೆ ನಿವಾರಣೆಗೆ ಶ್ರಮ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:33 IST
Last Updated 6 ಆಗಸ್ಟ್ 2021, 14:33 IST

ಕೋಲಾರ: ‘ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಜನರಿಗೆ ಒಳ್ಳೆಯದು ಮಾಡುವುದಕ್ಕೆ ನಾನು ಶ್ರೀನಿವಾಸಗೌಡರು ಒಟ್ಟಾಗಿ ಶ್ರಮಿಸಿದ್ದೇವೆ. ಜನಪರ ಕಾರ್ಯಕ್ಕೆ ಯಾವ ಪಕ್ಷವಾದರೆ ಏನು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ತಿಳಿಸಿದರು.

ತಾಲ್ಲೂಕಿನ ಹೋಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನರಿಗೆ ನೀರು, ರಸ್ತೆ ಸೌಕರ್ಯ ಕಲ್ಪಿಸುವುದು ಸೇರಿದಂತೆ ಜನಪರವಾದ ಒಳ್ಳೆಯ ಕೆಲಸ ಮಾಡಲು ಮತ್ತು ಸಂಕಷ್ಟದಲ್ಲಿರುವವರಿಗೆ ಸಾಲ ಒದಗಿಸಲು ನಾನು ಶ್ರೀನಿವಾಸಗೌಡರು ಒಟ್ಟಾಗಿ ಶ್ರಮಿಸುತ್ತಿದ್ದೇವೆ. ಇದು ತಪ್ಪೇ?’ ಎಂದು ಪ್ರಶ್ನಿಸಿದರು.

‘ಶ್ರೀನಿವಾಸಗೌಡರು ಹುಟ್ಟಿ ಬೆಳೆದ ಜಾಗವಿದು. ಜನರಿಗೆ ಒಳ್ಳೆಯ ಕೆಲಸ ಆಗಬೇಕೆನ್ನುವ ಕಾರಣಕ್ಕೆ ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಇದರಲ್ಲಿ ತಪ್ಪು ಹುಡುಕಬಾರದು. ಒಳ್ಳೆಯ ಕೆಲಸ ಜತೆಯಾಗಿ ಮಾಡಿದರೆ ಶ್ರೀನಿವಾಸಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಏಕೆ? ಅವರು ಕಾಂಗ್ರೆಸ್‌ಗೆ ಸೇರಿದರೂ ಅಷ್ಟೇ ಸೇರದಿದ್ದರೂ ಅಷ್ಟೇ, ಒಟ್ಟಾಗಿ ಜನರ ಕೆಲಸ ಮಾಡುತ್ತಲೇ ಇರುತ್ತೇವೆ’ ಎಂದು ಹೇಳಿದರು.

ADVERTISEMENT

‘ಕೆಲವರಿಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ, ಅಂತಹವರು ಅಪಪ್ರಚಾರ ಮಾಡುತ್ತಾರೆ. ನಮಗೆ ಜನರ ನೆಮ್ಮದಿ ಮುಖ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಉಳಿಯುತ್ತದೆಯಾಅಥವಾ ಇಲ್ಲವಾ ಗೊತ್ತಿಲ್ಲ. ಸರ್ಕಾರದ ಭವಿಷ್ಯ ಹೇಳಲು ನಾನು ಜೋತಿಷಿಯಲ್ಲ. ಬೆಲ್ಲ ಇರುವ ಕಡೆ ನೊಣ ಬರುತ್ತವೆ. ಹಾಗೆಯೇ ಕಿತ್ತಾಟ ಸಾಮಾನ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.