ADVERTISEMENT

ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡಿ

ಇಂದು ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 14:56 IST
Last Updated 24 ಮಾರ್ಚ್ 2019, 14:56 IST
ಕೋಲಾರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖಂಡರನ್ನು ಅಭಿನಂಧಿಸಲಾಯಿತು.
ಕೋಲಾರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖಂಡರನ್ನು ಅಭಿನಂಧಿಸಲಾಯಿತು.   

ಕೋಲಾರ: ‘ಪಕ್ಷದ ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ವ್ಯಕ್ತಿಗಿಂತ ಪಕ್ಷ ದೊಡ್ಡದು. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ಕೆಲಸ ಮಾಡಬೇಕು, ಟಿಕೆಟ್ ಅಕಾಂಕ್ಷಿಗಳಾಗಿದ್ದವರು ಅಭ್ಯರ್ಥಿಪರ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಲೋಕಸಭೆ ಚುನಾವಣಾ ಟಿಕೆಟ್‌ಗಾಗಿ ಹಲವು ಮಂದಿ ಆಕಾಂಕ್ಷಿಗಳಾಗಿದ್ದರು, ಈಗ ಅವಕಾಶ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಅವಕಾಶ ಸಿಗುತ್ತದೆ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಎಸ್.ಮುನಿಸ್ವಾಮಿಯನ್ನು ಘೋಷಿಸಿದ್ದು, ಸೋಮವಾರ (ಮಾ.25) ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಕೋಲಾರ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಮುಖ್ಯವಾಗಿದೆ’ ಎಂದರು.

ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಮಾತನಾಡಿ, ‘ಈ ಭಾರಿ ಕ್ಷೇತ್ರದ ಜನ ಬದಲಾವಣೆ ಭಯಸುತ್ತಿದ್ದು, ನಾನೇನು ಈ ಭಾಗಕ್ಕೆ ಹೊಸಬನಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದ್ದು, ಸಕಾಲಕ್ಕೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಗೊಂದಲ ಹೇಳಿಕೆಗಳಿಗೆ ಯಾರು ಕಿವಿಗೋಡಬಾರದು’ ಎಂದು ಕೋರಿದರು.

‘ಸಂಸದ ಕೆ.ಎಚ್.ಮುನಿಯಪ್ಪ ಬಿಟ್ಟ ರೈಲುಗಳು ಕೆಲವೇ ತಿಂಗಳುಗಳಿಗೆ ನಿಂತು ಹೋಗಿವೆ. ಆದರೂ ಸಹ ಅವರು ರೈಲ್‌ ಬಿಡೊದನ್ನ ಇನ್ನು ಬಿಟ್ಟಿಲ್ಲ. ಇದಕ್ಕೆ ಕ್ಷೇತ್ರದ ಮತದಾರರು ಅಂತ್ಯ ಕಾಣಿಸಬೇಕು. ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ಕೆ.ಎಚ್.ಮುನಿಯಪ್ಪ ಮತ ಕೇಳಲು ನಾಚಿಕೆ ಆಗಬೇಕು, ಜನ ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಸದ್ಯಕ್ಕೆ ಲಭ್ಯವಿರುವ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತದಾರರಿಗೂ ಮುನಿಯಪ್ಪನವರ ಅಕ್ರಮಗಳ ಅರಿವಾಗಿದ್ದು, ತಕ್ಕ ಪಾಠ ಕಲಿಸಬೇಕು’ ಎಂದು ಎಚ್ಚರಿಸಿದರು.

‘ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದರು. ಪಕ್ಷದ ವರಿಷ್ಠರು ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ನನ್ನ ಗೆಲುವಿಗೆ ಶ್ರಮಿಸುವಂತೆ ಎಲ್ಲ ಮುಖಂಡರನ್ನು ಕೋರಿದ್ದು, ಸಂಸದರ ವೈಫಲ್ಯಗಳ ಬಗ್ಗೆ ಜನಕ್ಕೆ ಅರಿವು ಮೂಡಿಸುವ ಮೂಲಕ ಮತಯಾಚನೆ ಮಾಡಬೇಕು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಲೋಕಸಭಾ ಕ್ಷೇತ್ರದ ಸಂಚಾಲಕ ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ, ಉಪಾಧ್ಯಕ್ಷ ವಿಜಯಕುಮಾರ್, ವಾಸುದೇವ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.