ADVERTISEMENT

ನ್ಯಾಯಾಂಗ ವ್ಯವಸ್ಥೆ ಇತಿಮಿತಿಯಲ್ಲಿ ಕಾರ್ಯ: ಕೆ.ವಿ.ಮಧುಸೂದನರಾಮ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 12:50 IST
Last Updated 21 ಆಗಸ್ಟ್ 2021, 12:50 IST
ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕೆ.ವಿ.ಮಧುಸೂದನರಾಮ್ ಮತ್ತು ಅವರ ಪತ್ನಿ ಸುಧಾ ಅವರನ್ನು ಕೋಲಾರದಲ್ಲಿ ಶನಿವಾರ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು
ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕೆ.ವಿ.ಮಧುಸೂದನರಾಮ್ ಮತ್ತು ಅವರ ಪತ್ನಿ ಸುಧಾ ಅವರನ್ನು ಕೋಲಾರದಲ್ಲಿ ಶನಿವಾರ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು   

ಕೋಲಾರ: ‘ಸಂವಿಧಾನದ ಆಶಯಕ್ಕೆ ಧಕ್ಕೆಯಾಗದಂತೆ ನ್ಯಾಯಾಂಗ ವ್ಯವಸ್ಥೆಯ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕೆ.ವಿ.ಮಧುಸೂದನರಾಮ್ ಹೇಳಿದರು.

ಗೆಳೆಯರು ಹಾಗೂ ಅಭಿಮಾನಿಗಳ ಬಳಗವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ಪೀಕರಿಸಿ ಮಾತನಾಡು, ‘ಕಡು ಬಡತನದಲ್ಲಿ ಜನಿಸಿದ ನನ್ನನ್ನು ತಂದೆ ವೆಂಕಟಮುನಿಯಪ್ಪ ಕಷ್ಟದಿಂದ ಸಾಕಿದರು. ಬಾಲ್ಯದಲ್ಲಿ ತಂದೆಯು ನನ್ನಿಂದ ಚೆನ್ನಾಗಿ ಓದುವ ವಾಗ್ದಾನ ಪಡೆದುಕೊಂಡು ಕುಡಿತದ ಚಟ ಬಿಟ್ಟರು’ ಎಂದರು.

‘ಕನ್ನಡ ಮಾಧ್ಯಮಲ್ಲಿ ವ್ಯಾಸಂಗ ಮಾಡಿದ ನಾನು 2000ರಲ್ಲಿ ವಕೀಲ ವೃತ್ತಿ ಆರಂಭಿಸಿದಾಗ ಜಿಲ್ಲೆಯ ಹಲವರು ವೃತ್ತಿಪರವಾಗಿ ನೆರವು ನೀಡಿದರು. ನಂತರ ಸರ್ಕಾರಿ ಅಭಿಯೋಜಕನಾಗಿ ಆಯ್ಕೆಯಾದರೂ ನ್ಯಾಯಾಧೀಶನಾಗಬೇಕೆಂಬ ಛಲದಿಂದ 2 ಬಾರಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಬರೆದೆ. ಆದರೆ, ಆಯ್ಕೆಯಾಗಲಿಲ್ಲ. 3ನೇ ಬಾರಿಗೆ ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ ಬರೆದಾಗ ಆಯ್ಕೆಯಾದೆ’ ಎಂದು ವಿವರಿಸಿದರು.

ADVERTISEMENT

‘ಯಾವುದೇ ಸಂದರ್ಭದಲ್ಲೂ ನ್ಯಾಯಾಧೀಶರ ಹುದ್ದೆಯ ಗೌರವ ಘನತೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ’ ಎಂದು ವಾಗ್ದಾನ ಮಾಡಿದರು.

‘ಶಾಸಕಾಂಗ, ಕಾರ್ಯಾಂಗಕ್ಕಿಂತಲೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಿಂದ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಮಧುಸೂದನರಾಮ್ ತಮ್ಮ ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಏರಿದ್ದಾರೆ’ ಎಂದು ವಕೀಲ ಕೆ.ಆರ್.ಧನರಾಜ್ ಶ್ಲಾಘಿಸಿದರು.

‘ಸಹೋದ್ಯೋಗಿಯಾಗಿ ವಕೀಲ ವೃತ್ತಿ ನಡೆಸುತ್ತಿದ್ದ ಮಧುಸೂದನರಾಮ್ ಸತತ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ನ್ಯಾಯಾಧೀಶರಾಗುವ ಗುರಿ ತಲುಪಿದ್ದಾರೆ. ಅವರ ಆಯ್ಕೆ ಇಡೀ ಕೋಲಾರ ಜಿಲ್ಲೆಗೆ ಸಂದ ಗೌರವ’ ಎಂದು ವಕೀಲ ಕೆ.ವಿ.ಸುರೇಂದ್ರಕುಮಾರ್ ಅಭಿಪ್ರಾಯಪಟ್ಟರು.

ಗೆಳೆಯರ ಬಳಗದ ಬಾಬು, ದಲಿತ ಮುಖಂಡ ಮುನಿರಾಜು, ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಣಕಾಸು ಸಮಿತಿಯ ಕೆ.ಜಯದೇವ್, ಜಿಲ್ಲಾ ಎಸ್‍ಸಿ–ಎಸ್‍ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಬು, ಭಾರತೀಯ ದಲಿತ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.