ADVERTISEMENT

ಕೋಲಾರದಲ್ಲಿ ಯುವತಿ ಅಪಹರಣ ಪ್ರಕರಣ: ಭಗ್ನ ಪ್ರೇಮಿ ಸೇರಿ ಮೂವರ ಬಂಧನ

ಜಿಲ್ಲೆಯ ಗಡಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳು‌‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:47 IST
Last Updated 19 ಆಗಸ್ಟ್ 2020, 16:47 IST

ಕೋಲಾರ: ನಗರದಲ್ಲಿ ಆ.13ರಂದು ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅಪಹೃತ ಯುವತಿಯ ಪ್ರಿಯಕರ ಶಿವು ಹಾಗೂ ಆತನಿಗೆ ಕೃತ್ಯಕ್ಕೆ ಸಹಕರಿಸಿದ್ದ ಬಾಲಾಜಿ ಮತ್ತು ದೀಪಕ್‌ ಬಂಧಿತ ಆರೋಪಿಗಳು.

ಯುವತಿಯು ತಂಗಿಯ ಜತೆ ಎಂ.ಬಿ ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ನಡೆದು ಹೋಗುತ್ತಿದ್ದಾಗ ಶಿವು ಇತರೆ ಆರೋಪಿಗಳ ಜತೆ ಕಾರಿನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಅಪಹರಿಸಿದ್ದ. ನಂತರ ಆರೋಪಿಗಳು ಯುವತಿಯನ್ನು ಕಾರಿನಲ್ಲಿ ತುಮಕೂರಿಗೆ ಎಳೆದೊಯ್ದು ಅಲ್ಲಿನ ಲಾಡ್ಜ್‌ವೊಂದರ ಕೊಠಡಿಯಲ್ಲಿ ಕೂಡಿ ಹಾಕಿದ್ದರು.

ADVERTISEMENT

ಆ.14ರ ನಸುಕಿನಲ್ಲಿ ಆರೋಪಿಗಳು ಗಾಢ ನಿದ್ದೆಯಲ್ಲಿದ್ದಾಗ ಯುವತಿಯು ಕೊಠಡಿಯಿಂದ ತಪ್ಪಿಸಿಕೊಂಡು ಹೊರ ಬಂದು ಸಮೀಪದ ಅಂಗಡಿಯ ಕೆಲಸಗಾರರ ಮೊಬೈಲ್‌ನಿಂದ ತನ್ನ ತಂದೆಗೆ ಕರೆ ಮಾಡಿ ತುಮಕೂರಿನಲ್ಲಿ ಇರುವುದಾಗಿ ತಿಳಿಸಿದ್ದರು.

ಬಳಿಕ ಯುವತಿಯ ತಂದೆ ನಗರದ ಗಲ್‌ಪೇಟೆ ಠಾಣೆಗೆ ಮಾಹಿತಿ ನೀಡಿದ್ದರು. ನಂತರ ಗಲ್‌ಪೇಟೆ ಪೊಲೀಸರು ತುಮಕೂರು ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿ ಯುವತಿಯ ಬಗ್ಗೆ ಮಾಹಿತಿ ಕೊಟ್ಟಿದ್ದರು/ ತುಮಕೂರು ಪೊಲೀಸರು ಲಾಡ್ಜ್‌ನ ಬಳಿ ಹೋದಾಗ ಯುವತಿಯ ಹುಡುಕಾಟದಲ್ಲಿದ್ದ ಆರೋಪಿಗಳು ಗಾಬರಿಯಾಗಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು.

ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಆರೋಪಿಗಳು ವಾಹನದಿಂದ ಕೆಳಗಿಳಿದು ಸಮೀಪದ ಕೆರೆಯಂಗಳಕ್ಕೆ ಓಡಿ ತಪ್ಪಿಸಿಕೊಂಡಿದ್ದರು. ಆ ನಂತರ ಕೋಲಾರ ನಗರ ಠಾಣೆ ಪೊಲೀಸ್ ಸಿಬ್ಬಂದಿ ತಂಡವು ಯುವತಿಯನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿತ್ತು.

ಪ್ರೀತಿ ನಿರಾಕರಣೆ: ಕೋಲಾರದ ದೇವಾಂಗಪೇಟೆ ನಿವಾಸಿಯಾದ ಆರೋಪಿ ಶಿವು ಆ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿಯು ಆತನನ್ನು ಪ್ರೀತಿಸಲು ನಿರಾಕರಿಸಿದ್ದರು. ಯುವತಿ ಪೋಷಕರು ಸಹ ಮದುವೆ ಮಾಡಿಕೊಡಲು ಒಪ್ಪಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಶಿವು ಸ್ನೇಹಿತರ ಜತೆ ಸಂಚು ರೂಪಿಸಿ ಯುವತಿಯನ್ನು ಅಪಹರಿಸಿದ್ದ. ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.