ಬಂಗಾರಪೇಟೆ: ಪದವಿ ಮುಗಿಸಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವರೆಗೂ ರಾಜ್ಯ ಸರ್ಕಾರ ಹಣಕಾಸು ನೆರವು ನೀಡುವ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ನಿರಾಸಕ್ತಿ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ ಮುಗಿಸಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವರೆಗೂ ಸರ್ಕಾರ ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ₹3 ಸಾವಿರ ಹಣಕಾಸು ನೆರವು ಸಿಗುತ್ತಿದೆ. ಆದರೆ ತಾಲ್ಲೂಕಿನಲ್ಲಿ ಪದವೀಧರ ನಿರುದ್ಯೋಗಿಗಳು ನೋಂದಣಿ ಮಾಡಿಸಿಕೊಂಡಿಲ್ಲ. ಇದರಿಂದ ಸರ್ಕಾರದ ಯೋಜನೆ ತಾಲೂಕಿನಲ್ಲಿ ವ್ಯರ್ಥವಾಗುತ್ತಿದೆ ಎಂದು ಬೇಸರಿಸಿದರು.
ಕೇವಲ 640 ವಿದ್ಯಾರ್ಥಿಗಳು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಡಿಪ್ಲೋಮಾ ವಿದ್ಯಾರ್ಥಿಗಳೂ ಸಹ ಯುವ ನಿಧಿ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಕೇವಲ ಆರು ವಿದ್ಯಾರ್ಥಿಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಅಸಮಧಾನವ್ಯಕ್ತಪಡಿಸಿದರು. ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾಲೇಜುಗಳಲ್ಲಿ ಪ್ರಚಾರ ಮಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳೂ ₹2ಸಾವಿರ ಅವರ ಖಾತೆಗೆ ಜಮಾ ಆಗುತ್ತಿದೆ. ಜೂನ್ ತಿಂಗಳಿನವರೆಗೂ ಹಣ ಸಂದಾಯವಾಗಿದೆ. ಆದರೆ ಶೇ100ರಷ್ಟು ಇದರಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗಿಲ್ಲ. 68 ಫಲಾನುಭವಿಗಳಿಗೆ ಇನ್ನೂ ಹಣ ಜಮಾವಾಗುತ್ತಿಲ್ಲ. ಅವರ ಆಧಾರ್ ಕಾರ್ಡ್ ಸಿಡಿಂಗ್ ಆಗದ ಕಾರಣ ವಿಫಲವಾಗಿದೆ. ಈ ಬಗ್ಗೆ ಸಿಡಿಪಿಒ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಅವರನ್ನೂ ಇದರ ವ್ಯಾಪ್ತಿಗೆ ಬರುವಂತೆ ಶ್ರಮಿಸಬೇಕೆಂದು ನಿರ್ದೇಶಿಸಿದರು.
ಶಕ್ತಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಜೂನ್ ಅಂತ್ಯದವರೆಗೂ 2,24,86,994 ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಎಲ್ಲಾ ಐದು ಗ್ಯಾರಂಟಿ ಯೋಜನೆಗಳು ಯಾವುದೇ ಲೋಪವಿಲ್ಲದಂತೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ ಎಂದು ಅಧ್ಯಕ್ಷ ಪಾರ್ಥಸಾರಥಿ ಶ್ಲಾಘಿಸಿದರ.
ಉಪಾಧ್ಯಕ್ಷ ರಫೀಕ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್. ರವಿಕುಮಾರ್, ಸದಸ್ಯರಾದ ಶಂಕರ್, ಹರೀಶ್ ಕುಮಾರ್, ವಿವೇಕಾನಂದ, ಬೀರಪ್ಪ, ನಾರಾಯಣಸ್ವಾಮಿ, ಸುಜಾತಮ್ಮ, ಲಕ್ಮಮ್ಮ, ಸಿಡಿಪಿಒ ಮುನಿರಾಜು, ಆಹಾರ ನಿರೀಕ್ಷಕ ಬಲರಾಂಸಿಂಗ್, ಬೆಸ್ಕಾಂ ಎಇಇ ಸುಕುಮಾರರಾಜು ಉಪಸ್ಥಿತರಿದ್ದರು.
ಬಂಗಾರಪೇಟೆ: 640 ವಿದ್ಯಾರ್ಥಿಗಳು ಮಾತ್ರ ನೋಂದಣಿ ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಕೇವಲ ಆರು ನೋಂದಣಿ ಗೃಹಲಕ್ಷ್ಮಿ: ಶೇ100ರಷ್ಟು ಸಾಧನೆಯಾಗಿಲ್ಲ
ಒತ್ತಡ ನಿವಾರಣೆಗೆ ಮತ್ತೊಂದು ಪಡಿತರ ಅಂಗಡಿ ಬಂಗಾರಪೇಟೆ: ತಾಲ್ಲೂಕಿನಲ್ಲಿ ಒಂದು ಸಾವಿರ ಪಡಿತರ ಚೀಟಿ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಒತ್ತಡ ನಿವಾರಿಸಲು ಮತ್ತೊಂದು ಅಂಗಡಿ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು. ಪಟ್ಟಣ ಸೇರಿದಂತೆ ಎಲ್ಲೆಲ್ಲಿ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಪಡಿತರ ಚೀಟಿಗಳಿವೆಯೋ ಅಲ್ಲಿ ಅಕ್ಕಿ ವಿತರಣೆಗೆ ಒತ್ತಡ ಹೆಚ್ಚಿರುತ್ತದೆ. ಆದ್ದರಿಂದ ನ್ಯಾಯ ಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಮತ್ತೊಂದು ಅಂಗಡಿ ತೆರಯುವಂತೆ ಸಮಿತಿಯು ಇಲಾಖೆ ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಇದರಿಂದ ಗ್ರಾಹಕರು ಸರತಿ ಸಾಲಿನಲ್ಲಿ ಹೆಚ್ಚು ಹೊತ್ತು ನಿಲ್ಲುವುದು ತಪ್ಪುತ್ತದೆ ಎಂದು ತಿಳಿಸಿದರು. ಈ ಕುರಿತು ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಎಷ್ಟು ಕಾರ್ಡ್‌ಗಳಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.