ಕೋಲಾರ: ಬಜೆಟ್, ಇನ್ನಿತರ ಸೌಲಭ್ಯಗಳು, ಸಚಿವ ಸ್ಥಾನದಿಂದ ವಂಚನೆ ಸೇರಿದಂತೆ ಪದೇಪದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಕೋಲಾರ ಜಿಲ್ಲೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸದಾಗಿ ಪ್ರಕಟಿಸಿರುವ ನಿಗಮ ಮಂಡಳಿಗಳಲ್ಲೂ ಸ್ಥಾನ ಲಭಿಸಿಲ್ಲ.
ಇದು ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಮುಖಂಡರು ಸಚಿವರಿಂದ ಹಿಡಿದು ಪ್ರಭಾವಿಗಳ ಮೂಲಕ ಶಿಫಾರಸು ಮಾಡಿಸಿದ್ದರು. ಈ ಬಾರಿ ನಿಗಮ ಮಂಡಳಿಯಲ್ಲಿ ತಮಗೆ ಸಿಕ್ಕೇಸಿಗುತ್ತದೆ ಎಂಬುದಾಗಿ ಕಾಯುತ್ತಿದ್ದರು.
ಹೈಕಮಾಂಡ್ ಬುಧವಾರ ಸಂಜೆ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಕೋಲಾರದ ಒಬ್ಬರ ಹೆಸರೂ ಇಲ್ಲ. ಹೀಗಾಗಿ, ಹಲವು ಮುಖಂಡರು ‘ಪ್ರಜಾವಾಣಿ’ಗೆ ಕರೆ ಮಾಡಿ ತಮ್ಮ ಅಸಮಾಧಾನ ಹೇಳಿಕೊಂಡರು. ಇವರಲ್ಲಿ ಹೆಚ್ಚಿನವರು ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರೇ ಇದ್ದಾರೆ.
‘ಪಕ್ಷನಿಷ್ಠರಾಗಿ ಎರಡು ದಶಕಗಳಿಂದ ದುಡಿಯುತ್ತಿದ್ದೇವೆ. ಆದರೂ ಅವಕಾಶ ಮಾಡಿಕೊಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾಗ ಭರವಸೆ ಕೊಟ್ಟಿದ್ದರು. ಆದರೆ, ಪಟ್ಟಿ ನೋಡಿ ನಿರಾಸೆಯಾಯಿತು’ ಎಂದು ಪಕ್ಷದ ಪ್ರಮುಖ ಮುಖಂಡರೊಬ್ಬರು ಹೇಳಿದರು.
ಜಿಲ್ಲೆಯ ಪಾಲಿಗೆ ತುಸು ಸಮಾಧಾನವೆಂದರೆ ಅವಿಭಜಿತ ಅವಳಿ ಜಿಲ್ಲೆಯ ಡಾ.ಬಿ.ಸಿ.ಮುದ್ದು ಗಂಗಾಧರ್ ಅವರನ್ನು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೈರಾಸಂದ್ರ ಗ್ರಾಮದವರು. ಬೆಂಗಳೂರಿನಲ್ಲಿ ದಂತ ವೈದ್ಯರಾಗಿದ್ದಾರೆ.
ಮುದ್ದು ಗಂಗಾಧರ್ 2023ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಅದರಲ್ಲೂ ಮುಳಬಾಗಿಲು ಕ್ಷೇತ್ರದಿಂದ ಬಿ ಫಾರಂ ಕೂಡ ಘೋಷಣೆ ಆಗಿತ್ತು. ಆದರೆ, ಕೊತ್ತೂರು ಮಂಜುನಾಥ್ ಅವರು ಪಟ್ಟು ಹಿಡಿದು ತಮ್ಮ ಬೆಂಬಲಿಗ ಆದಿನಾರಾಯಣ ಅವರಿಗೆ ಟಿಕೆಟ್ ಕೊಡಿಸಿದ್ದರು. ಟಿಕೆಟ್ ಪ್ರಕಟಿಸಿದ 12 ಗಂಟೆಯೊಳಗೆ ಅಭ್ಯರ್ಥಿಯನ್ನು ಬದಲಾಯಿಸಲಾಗಿತ್ತು. ಆ ಚುನಾವಣೆಯಲ್ಲಿ ಆದಿನಾರಾಯಣ ಸೋಲು ಕಂಡಿದ್ದರು.
ಮಾವು ಬೆಳೆಗಾರರ ಕಷ್ಟ ಗೊತ್ತಿದೆ
‘ನಾನು ಕೋಲಾರ ಅವಿಭಜಿತ ಜಿಲ್ಲೆಯವನು. ಮಾವು ಬೆಳೆಗಾರರ ಕಷ್ಟ ಏನೆಂಬುದು ಗೊತ್ತಿದೆ. ಅವರ ಏಳಿಗೆಗೆ ನಾನು ಸದಾ ಬದ್ಧ. ಹೊಸ ಯೋಜನೆಗಳ ಮೂಲಕ ಸದಾ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ನೂತನ ಅಧ್ಯಕ್ಷರ ಡಾ.ಬಿ.ಸಿ.ಮುದ್ದು ಗಂಗಾಧರ್ ತಿಳಿಸಿದರು. ‘2023ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದ ‘ಬಿ’ ಫಾರಂ ಸಿಕ್ಕಿಯೂ ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿದಾಗ ಬೇಸರವಾಗಿತ್ತು. ಆಗ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಸಮಾಧಾನ ಮಾಡಿದ್ದರು. ಈಗ ಕಾಂಗ್ರೆಸ್ ಪಕ್ಷ ನನಗೆ ಅವಕಾಶ ನೀಡಿದೆ. ಹೈಕಮಾಂಡ್ ಹಾಗೂ ರಾಜ್ಯ ಮುಖಂಡರು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.