ADVERTISEMENT

ಮುಳಬಾಗಿಲು: ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:23 IST
Last Updated 20 ಮೇ 2025, 14:23 IST
ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಮುಳಬಾಗಿಲು: ತಾಲ್ಲೂಕಿನ ನಂಗಲಿ, ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯತಿಗಳು ಮತ್ತು ಗ್ರಂಥಾಲಯ, ಅಂಗನವಾಡಿ ಹಾಗೂ ಟಿ.ಕುರುಬರಹಳ್ಳಿ ಗ್ರಾಮಕ್ಕೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ.ಬಾಗೇವಾಡಿ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು.

ಮೊದಲಿಗೆ ನಂಗಲಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಕಚೇರಿಯಲ್ಲಿನ ಕಡತಗಳ ನಿರ್ವಹಣೆ ಹಾಗೂ ಕಚೇರಿಯ ಸ್ವಚ್ಚತೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ನಂತರ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಬೀಳುವ ಸ್ಥಿತಿಯಲ್ಲಿದ್ದ ಹಳೆಯದಾದ ಕಟ್ಟಡವನ್ನು ನೋಡಿ ಕೂಡಲೇ ನೂತನ ಕಟ್ಟಡದ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಡ್ಡೂರು ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಆಹಾರ, ದಾಖಲಾತಿಗಳನ್ನು ಪರಿಶೀಲನೆ ಮಾಡಿದರು. ಮಕ್ಕಳಿಗೆ ನೀಡುವ ಆಹಾರ ಸಾಮಾಗ್ರಿಗಳನ್ನು ಪರೀಕ್ಷಿಸಿದರು. ಅಂಗನವಾಡಿಯನ್ನು ಹೆಚ್ಚು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು ಹಾಗೂ ಆಹಾರ ಸಾಮಾಗ್ರಿಗಳನ್ನು ಜಾಗರೂಕತೆಯಿಂದ ವೀಕ್ಷಿಸಿ ಮಕ್ಕಳಿಗೆ ನೀಡಬೇಕು. ಸುರಕ್ಷತೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಎಚ್ಚರಿಸಿದರು.

ADVERTISEMENT

ನೆಲಕ್ಕೆ ಬಿದ್ದ ನಾಮಫಲಕ: ಕೆಳಗೆ ಬಿಸಾಡಲಾಗಿದ್ದ ಜಲ ಜೀವನ್ ಮಿಷನ್ ನಾಮಫಲಕವನ್ನು ನೋಡಿ ಕೆಂಡಾಮಂಡಲವಾದರು. ನಾಮಫಲಕವನ್ನು ಹಾಕುವ ಉದ್ದೇಶವನ್ನು ವಿವರಿಸಿದರು. ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಕಲಾಗಿರುವ ನಾಮ ಫಲಕವನ್ನು ಅನಾಥವಾಗಿ ಬಿಸಾಡಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗಡ್ಡೂರು ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ, ಪುಸ್ತಕಗಳ ಹಾಗೂ ಗಣಕಯಂತ್ರಗಳ ನಿರ್ವಹಣೆ, ಸ್ವಚ್ಚತೆ, ಹಾಜರಾತಿ, ಬೇಸಿಗೆ ಶಿಬಿರದ ಮಾಹಿತಿ ಹಾಗೂ ಚಟುವಟಿಕೆಗಳು ಮತ್ತಿತರ ವಿಷಯಗಳ ಬಗ್ಗೆ ಗ್ರಂಥಾಲಯ ಮೇಲ್ವಿಚಾರಕ ನರಸಿಂಹ ಶೆಟ್ಟಿ ಅವರೊಂದಿಗೆ ಚರ್ಚಿಸಿದರು.

ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಚರಂಡಿಗಳ ನಿರ್ವಹಣೆಯನ್ನು ಗಮನಿಸಿದರು. ಕೂಸಿನ ಮನೆಗೆ ನಾಮಫಲಕವೇ ಇಲ್ಲದಿರುವುದನ್ನು ಗಮನಿಸಿ ಕೂಡಲೇ ನಾಮಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ನಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸಿ.ಶ್ರೀಧರ್, ಪಿಡಿಒ ಚಿಕ್ಕನರಸಿಂಹಯ್ಯ, ಕಾರ್ಯದರ್ಶಿ ವಿಶ್ವನಾಥ್, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ಪಿಡಿಒ ಕೆ.ಸರಿತಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.