ADVERTISEMENT

ಅಂದದಿ ಕಾಣುವ ‘ಚಂದನ’ ಜಲಪಾತ

ಕಿಶನರಾವ್‌ ಕುಲಕರ್ಣಿ
Published 8 ಅಕ್ಟೋಬರ್ 2017, 9:06 IST
Last Updated 8 ಅಕ್ಟೋಬರ್ 2017, 9:06 IST
ಹನುಮಸಾಗರ ಸಮೀಪ ಚಂದನ ಜಲಪಾತದಲ್ಲಿ ಬಂಡೆಯ ಮೇಲೆ ನೀರು ಬಿದ್ದಾಗ ಹಾಸಿಗೆಯಂತೆ ಕಾಣುವ ನೋಟ
ಹನುಮಸಾಗರ ಸಮೀಪ ಚಂದನ ಜಲಪಾತದಲ್ಲಿ ಬಂಡೆಯ ಮೇಲೆ ನೀರು ಬಿದ್ದಾಗ ಹಾಸಿಗೆಯಂತೆ ಕಾಣುವ ನೋಟ   

ಹನುಮಸಾಗರ: ಸಮೀಪದ ಐತಿಹಾಸಿಕ ಸ್ಥಳ ಚಂದಾಲಿಂಗೇಶ್ವರ ಸಮೀಪದಲ್ಲಿರುವ ‘ಚಂದನ ಜಲಪಾತ’ ಬೆಳ್ಳಿಯ ನೊರೆಯ ಹಾಗೆ ಮೈದುಂಬಿ ಧುಮ್ಮಿಕುತ್ತಿದೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ ಜಿಲ್ಲೆಗಳ ಭಾಗಕ್ಕೆ ಕಪ್ಪಲೆಪ್ಪ ಜಲಪಾತ ಬಿಟ್ಟರೆ ಮತ್ಯಾವ ಜಲಪಾತಗಳು ಇಲ್ಲ ಎಂಬ ಮಾತನ್ನು ಈ ಚಂದನ ಜಲಪಾತ ಸದ್ಯ ಸುಳ್ಳಾಗಿಸಿದೆ.

ಕಾಲ್ನಡಿಗೆಯಲ್ಲಿಯೇ ಹೋಗಬೇಕು: ಈ ಜಲಪಾತಕ್ಕೆ ಐತಿಹಾಸಿಕ ಕ್ಷೇತ್ರ ಚಂದಾಲಿಂಗ ದೇವಸ್ಥಾನದ ಹಿಂಭಾಗದಿಂದ ಸುಮಾರು ಎರಡು ಕಿ.ಮೀ ಕಾಲ್ನಡಿಗೆಯಲ್ಲಿ ಬೆಟ್ಟ ಏರಿ ಇಳಿದರೆ ಕಲ್ಲಿನ ಪಡುಗಳ ಮೂಲಕ ತಪ್ಪಲುಗಳ ಮಧ್ಯೆ ಎರಡು ಭಾಗಗಳಾಗಿ ನೀರು ಪುಟಿದು ಬೀಳುವ ಈ ಜಲಪಾತ ಕಣ್ಣಿಗೆ ಬೀಳುತ್ತದೆ.

ಇದು ತೀರಾ ಇಕ್ಕಟ್ಟಾದ ಪ್ರದೇಶವಾಗಿರುವುದರಿಂದ ಕುರಿಗಾರರನ್ನು ಹೊರತುಪಡಿಸಿದರೆ ಸ್ಥಳೀಯರಿಗೆ ಈ ಜಲಪಾತದ ಬಗ್ಗೆ ಅಷ್ಟೊಂದಾಗಿ ಮಾಹಿತಿ ಇಲ್ಲ. ಚಂದಾಲಿಂಗದ ಪ್ರದೇಶದಲ್ಲಿರುವ ಕಾರಣ ಚಂದನ ಜಲಪಾತ ಎಂದು ನಾಮಕರಣ ಮಾಡಿದ್ದಾರಾದರೂ ಹಿಂದೆ ಇದನ್ನು ‘ಸಿದ್ದನಕೊಳ್ಳ’ ಎಂದು ಕರೆಯುತ್ತಿದ್ದರು ಎಂದು ಹೇಳಲಾಗುತ್ತದೆ.

ADVERTISEMENT

ನಯನ ಮನೋಹರ ದೃಶ್ಯ: ಬೆಟ್ಟದಲ್ಲಿ ಹರಿದು ಬರುವ ನೀರು ಧುಮ್ಮುಕ್ಕುವ ಸದ್ದು ದೂರದಿಂದಲೇ ಕೇಳಿ ಬರುತ್ತದೆ. ಜಲಪಾತವಾಗಿ ಬಿದ್ದ ನೀರು ಬಂಡೆಯ ಮೇಲೆ ತೆಳುವಾಗಿ ಹರಿಯುವುದನ್ನು ನೋಡಿದರೆ ಸೂರ್ಯನ ನೇಸರಕ್ಕೆ ಬೆಳ್ಳಿಯ ಹೊಂಬೆಳಕು ಹರಿದಂತೆ ಭಾಸವಾಗುತ್ತದೆ.

ಹಸಿರಿನ ಮಧ್ಯೆ ಜಾರಿ ಬರುವ ನೀರು ಮುಂದೆ ಮೂರು ಕಡೆ ಜಲಪಾತಗಳನ್ನು ಸೃಷ್ಟಿಸಿ, ಮುಂದೆ ಹರಿದು ಬೀಳಗಿ ಕೆರೆ ಸೇರುತ್ತದೆ. ಕೆಳಗಡೆ ಹಾಸು ಬಂಡೆಗಳಿರುವುದರಿಂದ ಚಾರಣಿಗರಿಗೆ ಸ್ನಾನ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಆದಾಗ್ಯೂ ಜಲಪಾತದ ಅಡಿಗೆ ಇಳಿದು ಹೋಗುವುದು ಕಷ್ಟದ ಕೆಲಸ. ಬಂಡೆಗಳ ಮೇಲಿಂದ ಬಂಡೆಗೆ ಇಳಿಯುತ್ತಾ ಹೋಗುವಾಗ ಸಂಪೂರ್ಣ ಎಚ್ಚರದಿಂದ ಹೋಗಬೇಕು.

ನವಿಲಿನ ತಾಣ: ಈ ಪ್ರದೇಶದ ಸುತ್ತಮುತ್ತ ಹಸಿರಿನ ಪರಿಸರ, ಜುಳು ಜುಳು ಹರಿಯುವ ನೀರು, ಆಗೊಮ್ಮೆ, ಈಗೊಮ್ಮೆ ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು, ಗುಂಪಾಗಿ ಹಾರಿ ಹೋಗುವ ಬಾನಾಡಿಗಳು, ಗುಬ್ಬಚ್ಚಿಗಳ ಕಲರವ ಈ ಜಲಪಾತಕ್ಕೆ ಮತ್ತಷ್ಟು ಮೆರುಗು ತಂದಿವೆ.

ಈ ಪ್ರದೇಶ ಕಾಡಿನಿಂದ ಕೂಡಿರುವ ಕಾರಣ ಇಲ್ಲಿ ಕಾಡು ಹಂದಿಗಳು ಇವೆ. ಅಲ್ಲದೆ ಇಲ್ಲಿಗೆ ತೆರಳಲು ರಸ್ತೆಯೇ ಇಲ್ಲದ ಕಾರಣ ಕಾಲಿನಲ್ಲಿ ಕಸುವು ಹೊಂದಿ ರುವವರು ಮಾತ್ರ ಬರುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.