ADVERTISEMENT

ಅಕುಕನೂರು: ಪಿಯುಸಿ ಪರೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 6:35 IST
Last Updated 16 ಮಾರ್ಚ್ 2012, 6:35 IST

ಕುಕನೂರು: ಇಲ್ಲಿಯ ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗುರವಾರದಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಇತಿಹಾಸ ವಿಷಯದ  410 ವಿದ್ಯಾರ್ಥಿಗಳ ಪೈಕಿ 386 ವಿದ್ಯಾರ್ಥಿಗಳು ಹಾಜರಾಗಿದ್ದರೆ, 24 ವಿದ್ಯಾರ್ಥಿಗಳು ಗೈರು ಹಾಜರಿದ್ದರು.

ಸ್ಥಳೀಯ ವಿದ್ಯಾನಂದ ಗುರುಕುಲ, ಕೆ.ಎಲ್.ಇ, ಇಟಗಿ ಎಸ್.ಎಂ.ವಿ, ತಳಕಲ್ ಮತ್ತು ಬನ್ನಿಕೊಪ್ಪದ ಸರ್ಕಾರಿ ಪ.ಪೂ.ಕಾಲೇಜು ಹಾಗೂ ಮಂಗಳೂರಿನ ಬಾಪೂಜಿ ಪದವಿ ಪೂರ್ವ ಕಾಲೇಜಿನಿಂದ ಪರೀಕ್ಷಾ ಕೇಂದ್ರಕ್ಕೆ ಒಟ್ಟಾರೆ 570 ವಿದ್ಯಾರ್ಥಿಗಳಿದ್ದು, ಮಾ.15 ರಿಂದ ಮಾ.31ರ ವರೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸುಗಳ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯುತ್ತವೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪರೀಕ್ಷೆಗಳನ್ನು ನಿಯಮಾನುಸಾರ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿನ ನಿತ್ಯದ ಪರೀಕ್ಷೆಗಳನ್ನು ನಡೆಸಲು ಮುಖ್ಯ ಅಧೀಕ್ಷಕರು, ಸಹ ಮುಖ್ಯಅಧೀಕ್ಷಕರು, ಉತ್ತರ ಪತ್ರಿಕೆ ಪಾಲಕರು, ಕಾರ‌್ಯಾಲಯದ ಅಧೀಕ್ಷಕರು, ಕಾರ‌್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ದಿನಕ್ಕೆ ಬೇಕಾಗುವ ಕೊಠಡಿ ಮೇಲ್ವಿಚಾರಕರನ್ನು ವಿವಿಧ ಕಾಲೇಜುಗಳಿಂದ ನೇಮಕ ಮಾಡಿಕೊಳ್ಳಲಾಗಿದೆ.

ನಕಲು ಹಾವಳಿ ತಡೆಯಲು ಪ್ರತಿ ದಿನ ಇಬ್ಬರು ವಿಶೇಷ ಜಾಗೃತ ದಳದ ಸದಸ್ಯರು ಪರೀಕ್ಷಾ ಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದು, ಈ ನಡುವೆ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ವಿಶೇಷ ಜಾಗೃತ ದಳದ ಮುಖ್ಯಸ್ಥರು ಯಾವುದೇ ಸಮಯದಲ್ಲಿ ಆಗಮಿಸಬಹುದು. ಈಗಾಗಲೇ ಕೊಠಡಿ ಮೇಲ್ವಿಚಾರಕರಿಗೆ ಪೂರ್ವಭಾವಿ ಸಭೆ ನಡೆಸಿ ನಕಲು, ನಕಲಿ ವಿದ್ಯಾರ್ಥಿಯನ್ನು ಗುರುತಿಸುವುದು ಸೇರಿದಂತೆ ವಿದ್ಯಾರ್ಥಿಗಳು ನಿರ್ಭಿಡೆಯಿಂದ ಪರೀಕ್ಷೆ ಬರೆಯುವಂತಾಗಲು ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗಿದೆ ಎಂದು ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಪ್ರಾಂಶುಪಾಲರಾದ ಕೆ.ಪಿ.ಮುರಡಿ  `ಪ್ರಜಾವಾಣಿ~ಗೆ ವಿವರ ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.