ADVERTISEMENT

ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಶಾಸಕ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:15 IST
Last Updated 27 ಡಿಸೆಂಬರ್ 2012, 9:15 IST

ಗಂಗಾವತಿ: ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಸಾರ್ವಜನಿಕರಿಗೆ ಕಾಲಕಾಲಕ್ಕೆ ಅಗತ್ಯವಾಗುವ ನಾನಾ ಪ್ರಮಾಣಪತ್ರಗಳನ್ನು ಇನ್ನು ಮುಂದೆ ಒಂದೇ ಸೂರಿನಡಿ, ಅದೂ ಕಾಲವಧಿಯ ವಾಗ್ಧಾನದೊಂದಿಗೆ ಸೇವೆ ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಹಳೇಯ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದ ಕಾರ್ಯಾಚರಣೆಯ ಬಗ್ಗೆ ವಿವರಣೆ ನೀಡಿದರು.

ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ನೆಮ್ಮದಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನಿಗದಿತ ಅಲ್ಪ ಪ್ರಮಾಣದ ಸೇವೆ, ಪ್ರಮಾಣಪತ್ರಗಳು ಮಾತ್ರ ದೊರೆಯುತ್ತಿದ್ದವು. ಇದೀಗ ಅಟಲ್‌ಜೀ ಸ್ನೇಹ ಕೇಂದ್ರದ ಮೂಲಕ ಒಟ್ಟು 36ಕ್ಕೂ ಹೆಚ್ಚು ಸೇವೆ ನೀಡಲಾಗುತ್ತಿದೆ ಎಂದರು.

ತಹಸೀಲ್ದಾರ ಎ.ಎಚ್. ಆಲೂರು ಮಾತನಾಡಿ, ತಾಲ್ಲೂಕಿನ ಎಂಟು ಹೋಬಳಿ ಕೇಂದ್ರಗಳಾದ ಗಂಗಾವತಿ, ವೆಂಕಟಗಿರಿ, ಮರಳಿ, ಸಿದ್ದಾಪುರ, ಕಾರಟಗಿ, ನವಲಿ, ಕನಕಗಿರಿ ಮತ್ತು ಹುಲಿಹೈದರಗಳಲ್ಲಿ ಏಕಕಾಲಕ್ಕೆ ಅಟಲ್‌ಜೀ ಜನ ಸ್ನೇಹಿ ಕೇಂದ್ರಗಳು ಉದ್ಘಾಟನೆಯಾಗುತ್ತಿವೆ.

ಈ ಹಿಂದಿನಂತೆ ಪ್ರಮಾಣ ಪತ್ರಗಳಿಗೆ ರೂ, 15, ಮಾಸಾಶನ ಹಾಗೂ ಪಹಣಿ ಸೇವೆ ನೀಡಲು ತಲಾ ಐದು ರೂಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತಿದೆ. ಎಂದರು. ಗ್ರಾಮೀಣ ಭಾಗದಲ್ಲಿನ ವಿದ್ಯುತ್
ಸಮಸ್ಯೆ ನೆಮ್ಮದಿ ಕೇಂದ್ರಗಳ ವೈಫಲ್ಯಕ್ಕೆ ಕಾರಣವಾಗಿತ್ತು.

ಇದನ್ನು ಮನಗಂಡ ಸರ್ಕಾರ ಇದೀಗ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಸೋಲಾರ್ ವಿದ್ಯುತ್ ಸಂಪರ್ಕ  ಅಳವಡಿಸುವ ಚಿಂತನೆ ನಡೆಸಿದೆ. ಇದರ ಭಾಗವಾಗಿ ಜಿಲ್ಲೆಯ ಹಿಟ್ನಾಳ ಕೇಂದ್ರಕ್ಕೆ ಪ್ರಾಯೋಗಿಕ ಯೋಜನೆ ಜಾರಿಯಾಗಿದೆ ಎಂದು ತಹಸೀಲ್ದಾರ ತಿಳಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಜಾನೆಕಲ್ ಮಲ್ಲಿಕಾರ್ಜುನ, ಚುನಾವಣಾ ಶಿರಸ್ತೇದಾರ ಗುರುರಾಜ, ಅಟಲ್‌ಜೀ ಜನಸ್ನೇಹಿ ಕೇಂದ್ರದ ನಿರ್ವಾಹಕ ರಘು, ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಸದಸ್ಯ ಕೆ. ಅಂಬಣ್ಣ, ನಗರಸಭಾ ಸದಸ್ಯ ಮನೋಹರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.