ADVERTISEMENT

ಅಟಲ್‌ಜೀ ಜನಸ್ನೇಹಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:05 IST
Last Updated 26 ಡಿಸೆಂಬರ್ 2012, 6:05 IST

ಹನುಮಸಾಗರ: ಗ್ರಾಮೀಣ ಪ್ರದೇಶದ ಜನರಿಗೆ ದಿನನಿತ್ಯದ ಹಲವಾರು ಸೇವೆಗಳನ್ನು ನೀಡುವ ದೃಷ್ಟಿಯಿಂದ ಇಲ್ಲಿ  ನಾಡಕಚೇರಿ ಪ್ರಾರಂಭಿಸಲಾಗಿದ್ದು, ಇಲ್ಲಿ ಸುಮಾರು 44 ಸೇವೆಗಳನ್ನು ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು

ಮಂಗಳವಾರ ಇಲ್ಲಿ ನೂತನವಾಗಿ ನಾಡಕಚೇರಿ ಹಾಗೂ ಅಟಲ್‌ಜೀ ಜನಸ್ನೇಹಿ ಕೇಂದ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದರು.

ಈ ಕಾರ್ಯಲಯ ಸ್ಥಾಪಿಸಿರುವುದರಿಂದ ಸಾರ್ವಜನಿಕರಿಗೆ ಸಮಯ ಮತ್ತು ಪ್ರಯಾಣದ ಉಳಿತಾಯ ಮಾಡಿದಂತಾಗಿದೆ. ಹನುಮಸಾಗರ ಕಂದಾಯ ಹೋಬಳಿಗೆ 49 ಗ್ರಾಮಗಳು ಬರುತ್ತವೆ. ಕುಷ್ಟಗಿಗೆ ಹತ್ತಿರವಾಗುತ್ತಿದ್ದರೂ ಕೊರಡಕೇರಾ, ಹಿರೇಬನ್ನಿಗೋಳ, ಕಡೇಕೊಪ್ಪ ಮುಂತಾದ ಗ್ರಾಮಗಳೂ ಈ ಕೇಂದ್ರದ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹನುಮಸಾಗರ ಕೇಂದ್ರಕ್ಕೆ ದೂರವಾಗುವ ಗ್ರಾಮಗಳನ್ನು ಸಮೀಪದ ನಾಡಕಚೇರಿಗೆ ಸೇರಿಸುವ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ತಹಶೀಲ್ದಾರರಿಗೆ ಶಾಸಕರು ಸೂಚಿಸಿದರು. ನಾಡಕಚೇರಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ವಿವಿಧ ಸೇವೆಗಳ ಕುರಿತಾದ ನಾಮಫಲಕವನ್ನು ತೂಗು ಹಾಕಬೇಕು, ನಾಡ ತಹಸೀಲ್ದಾರರು, ಕಂದಾಯ ನಿರೀಕ್ಷಕರು ಲಭ್ಯವಿರುವ ಇಲ್ಲವೆ ಬೇರೆಡೆ ಕಾರ್ಯನಿಮಿತ್ತ ಹೋಗುವ ಬಗ್ಗೆ ಮುಂಚಿತವಾಗಿ ಸಾರ್ವಜನಿಕರಿಗೆ ಸೂಚನಾ ಫಲಕದ ಮೂಲಕ ತಿಳಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರ ವೀರೇಶ ಬಿರಾದಾರ, ನಾಡ ತಹಶೀಲ್ದಾರ ಸಯ್ಯದ್ ತಾಜುದ್ದೀನ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ರಾಠೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಮುಖಂಡರಾದ ಬಸವರಾಜ ಹಳ್ಳೂರ, ವಿ.ಎಚ್.ನಾಗೂರ, ಸಂಗಯ್ಯ ವಸ್ತ್ರದ, ಪ್ರಹ್ಲಾದ ಕಟ್ಟಿ, ಶಿವಪುತ್ರಪ್ಪ ಕಂಪ್ಲಿ, ನಜೀರ್‌ಸಾಬ ಮೂಲಿಮನಿ, ಸೂಚಪ್ಪ ಭೋವಿ, ಗ್ರಾ.ಪಂ. ಸದಸ್ಯರು, ಶಿರಸ್ತೇದಾರ ಸುರೇಶ ಕುಲಕರ್ಣಿ, ಕಂದಾಯ ನಿರೀಕ್ಷಕ ಮಹಮ್ಮದ್ ಮುಸ್ತಾಫ್, ಆಹಾರ ಶಿರಸ್ತೇದಾರ ರಾಜು ಫಿರಂಗಿ, ಗ್ರಾಮ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.