ADVERTISEMENT

ಅಬ್ಬರದಿಂದ ಹಬ್ಬುತ್ತಿದೆ ಹಬ್ಬುಶೇಂಗಾ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 7:03 IST
Last Updated 23 ಸೆಪ್ಟೆಂಬರ್ 2013, 7:03 IST

ಹನುಮಸಾಗರ: ಮಸಾರಿ ಭೂಮಿಯ ಬೆಳೆ ಹಬ್ಬುಶೇಂಗಾ ಬಿತ್ತನೆ ಪ್ರಮಾಣ ಈಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಕುಸಿತ ಕಂಡಿದ್ದು, ಬಿತ್ತನೆ ಬೀಜಗಳು ಮಾಯವಾಗುವ ಸ್ಥಿತಿ ತಲುಪಿದೆ. ಆದರೆ, ಈ ಭಾಗದ ರೈತರು ಮಾತ್ರ ಅಂತಹ ಕೃಷಿಯನ್ನು ಈಗಲೂ ಜೀವಂತವಾಗಿಟ್ಟಿದ್ದಾರೆ.

ಈ ಬಾರಿ ಮುಂಗಾರು ಮಳೆಗೆ ಹನುಮಸಾಗರ ಭಾಗದ ಮಾವಿನ ಇಟಗಿ, ಗುಡದೂರಕಲ್, ಬಾದಿಮನಾಳ ಗ್ರಾಮಗಳಲ್ಲಿ ಕೆಲ ರೈತರು ಒಣ ಬೇಸಾಯದ ಈ ಹಬ್ಬುಶೇಂಗಾ ಬಿತ್ತನೆ ಮಾಡಿದ್ದು, ಕಳೆದ ವಾರ ಸುರಿದ ಮಳೆಗೆ ಹಬ್ಬುಶೇಂಗಾ ಬೆಳೆ ಹೊಲದ ತುಂಬಾ ಹಬ್ಬುತ್ತಿದೆ.

ಜಾನುವಾರುಗಳಿಗಾಗಿ ಬೆಳೆಯುವ ಹಬ್ಬುಶೇಂಗಾ ಇತ್ತೀಚೆಗೆ ಬಹಳಷ್ಟು ರೈತರು ಮಳೆ ಕೊರತೆಯಿಂದ ಕೈಬಿಟ್ಟಿದ್ದಾರೆ. ಅಲ್ಲದೆ, ಹಬ್ಬುಶೇಂಗಾದಲ್ಲಿ ಎಣ್ಣೆ ಅಂಶ ಕಡಿಮೆ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲ. ಅಂದಾಜು ಐದು ತಿಂಗಳ ಅವಧಿಯ ಬೆಳೆ ಇದಾಗಿದೆ. ಕನಿಷ್ಠ ನಾಲ್ಕು ಉತ್ತಮ ಮಳೆಗಳು ಇದಕ್ಕೆ ಅವಶ್ಯ. ಮಣ್ಣಿಗೆ ಅಧಿಕ ಪ್ರಮಾಣದ ಸಾರಜನಕ ಒದಗಿಸುವ ಈ ಬೆಳೆ ಹಲವು ವರ್ಷಗಳಿಂದ ಗೌಣವಾಗಿದೆ.

‘ಜಾನುವಾರುಗಳ ಮುಖ ನೋಡಿದ್ರ ಹಬ್ಬುಶೇಂಗಾ ಹಾಕಬೇಕ್ರಿ, ಆದ್ರ ಮಳೆಯಪ್ಪನ ದಾರಿ, ಪ್ಯಾಟ್ಯಾಗಿನ ಧಾರಣಿ ನೋಡಿದ್ರ ಹಬ್ಬುಶೇಂಗಾ ಬಿತ್ತಬಾರದು ನೋಡ್ರಿ' ಎಂದು ರೈತ ಶಾಮಸುಂದರ ಪ್ಯಾಟಿ ಹೇಳುತ್ತಾರೆ.
ಈ ಭಾಗದ ಬಿಸಿ ವಾತಾವರಣ, ಮಣ್ಣು ಹಾಗೂ ಹವಾಮಾನ ಹಬ್ಬುಶೇಂಗಾ ಬೆಳೆಗೆ ಪೂರಕವಾಗಿದೆ. ಹೀಗಾಗಿ ಬಿತ್ತನೆ ಎಗ್ಗಿಲ್ಲದೆ ನಡೆಯುತ್ತಿದೆ.

ಉತ್ತಮ ಮಳೆಯಾದರೆ ನೆಲದ ತುಂಬ ಹಬ್ಬಿ ಉತ್ತಮ ಇಳುವರಿ ಬರುತ್ತದೆ. ರೈತರಿಗೆ ಹಣಕ್ಕಿಂತ ಜಾನುವಾರುಗಳಿಗೆ ಬೇಕಾದ ಹೊಟ್ಟು, ಮೇವಿಗಾಗಿ ಈ ಬೆಳೆಯನ್ನು ಮುಖ್ಯ ಬೆಳೆಯಾಗಿಸಿಕೊಂಡಿದ್ದರು.

‘ನಾವು ಹಬ್ಬುಶೇಂಗಾ ಬಿತ್ತೋದು ರೊಕ್ಕಕ್ಕಲ್ರಿ, ದನದ ಹೊಟ್ಟೆಗೆ. ಈ ಹೊಟ್ಟು ದಕ್ಕಲಿ ಅಂತ. ಗೆಜ್ಜೆಶೇಂಗಾದ ಹೊಟ್ಟು ಮಳೆಗೆ ತೊಯ್ದರೆ ಕೊಳಿತೈತಿ. ಆದ್ರ ಹಬ್ಬು ಶೇಂಗಾದ ಹೊಟ್ಟು ತೊಯ್ದರೂ ಒಣಗಿದ ಬಳಿಕ ಗರಿಗರಿಯಾಗಿ ಜಾನುವಾರುಗಳ ಬಾಯಿಗೆ ರುಚಿ ಕೊಡುತೈತಿ’ ಎನ್ನುತ್ತಾರೆ ರೈತ ಸಂಗಪ್ಪ.

ಇದರ ಬೇರುಗಳಲ್ಲಿ ರೈಜೋಬಿಯಂ ಅಣುಜೀವಿ ಇರುವುದರಿಂದ ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಪ್ರಮಾಣ ಸಂಗ್ರಹವಾಗುತ್ತದೆ. ಬಳ್ಳಿ ಹರಗಿದ ನಂತರ ಮಣ್ಣಿನಲ್ಲಿ ಮುಚ್ಚಿ ಹೋದ ಶೇಂಗಾ ಹೆಕ್ಕಲು ಮೇಲಿಂದ ಮೇಲೆ ನೇಗಿಲು, ಕುಂಟೆ ಹೊಡೆಯುವುದು, ಕೈಯಿಂದ ಕೆದರುವ ಕೃಷಿ ಚಟುವಟಿಕೆ ನಡೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎನ್ನುವುದು ರೈತರ ಅನುಭವದ ಮಾತು.

ದೇಸಿ ಬಿತ್ತನೆ ಬೀಜಗಳ ತಳಿ ಪೈಕಿ ಈ ಹಬ್ಬುಶೇಂಗವೂ ಒಂದಾಗಿದೆ. ಈಗಾಗಲೇ ಬಿತ್ತನೆ ಪ್ರಮಾಣ ಕಡಿಮೆಯಾಗಿ ಬೀಜಕ್ಕಾಗಿ ತಡಕಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.