ADVERTISEMENT

ಅವ್ಯವಸ್ಥೆ ಆಗರ ವಸತಿ ನಿಲಯ

ಉಮಾಶಂಕರ ಬ.ಹಿರೇಮಠ
Published 25 ನವೆಂಬರ್ 2017, 8:55 IST
Last Updated 25 ನವೆಂಬರ್ 2017, 8:55 IST
ಯಲಬುರ್ಗಾ ತಾಲ್ಲೂಕು ಮಂಗಳೂರು ಗ್ರಾಮದಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದು
ಯಲಬುರ್ಗಾ ತಾಲ್ಲೂಕು ಮಂಗಳೂರು ಗ್ರಾಮದಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದು   

ಯಲಬುರ್ಗಾ: ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿರುವ ಬಾಲಕಿಯರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಉತ್ತಮ ವಾತಾವರಣವಾಗಲಿ, ಶೌಚಾಲಯವಾಗಲಿ ಅಗತ್ಯ ಸೌಲಭ್ಯಗಳಿಲ್ಲದೇ ಅಲ್ಲಿಯ ಮಕ್ಕಳ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

ಸುಮಾರು ನೂರಕ್ಕು ಅಧಿಕ ಸಂಖ್ಯೆಯಲ್ಲಿರುವ ಈ ವಸತಿ ನಿಲಯದಲ್ಲಿ ಅಗತ್ಯ ಸಿಬ್ಬಂದಿ, ವಾಸಯೋಗ್ಯ ವಾತಾವರಣ ಇಲ್ಲ. ಮಳೆ ಬಂದರೆ ಸಂಪೂರ್ಣ ನೀರಲ್ಲೇ ಮುಳುಗುವ ಈ ನಿಲಯದ ಒಳಾಂಗಣದಲ್ಲಿ ಇಂದಿಗೂ ನೀರು ನಿಂತಿದೆ. ಕಟ್ಟಡದ ಕಂಪೌಂಡ್ ಒಳಗಡೆ ನುಗ್ಗಿದ ನೀರು ಹೊರಗಡೆ ಹೋಗಲು ಅವಕಾಶವಿಲ್ಲದೇ ಸಂಗ್ರಹಗೊಂಡಿದೆ.

‘ಒಂದು ತಿಂಗಳ ಹಿಂದೆ ಸುರಿದ ಮಳೆಯ ನೀರು ಸಂಗ್ರಹಗೊಂಡಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕೊಳಚೆಯಿಂದಾಗಿ ವಿದ್ಯಾರ್ಥಿನಿಯರು ಅನಾರೋಗ್ಯದಿಂದ ಬಳಲುವಂತಾಗಿದೆ’ ಎಂದು ಸ್ಥಳೀಯ ಶರಣಪ್ಪ ಪಾಟೀಲ ದೂರುತ್ತಾರೆ.

ADVERTISEMENT

‘ಕೊಳವೆಬಾವಿ ಕೊರೆಸಿದ್ದರೂ ಅದಕ್ಕೆ ಮೋಟರ್ ಅಳವಡಿಸಿಲ್ಲ, ಪಂಚಾಯಿತಿ ನಲ್ಲಿಯಿಂದ ರಾತ್ರಿ ಹಗಲು ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಿಲಯದ ಅಡುಗೆ ಸಹಾಯಕ ಶ್ರೀನಿವಾಸ ಹೇಳುತ್ತಾರೆ.

‘ನೀರಿನ ಕೊರತೆಯಿಂದ ಶೌಚಾಲಯ ನಿರ್ವಹಣೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಪರದಾಡುವಂತಾಗಿದೆ. ಕೂಡಲೇ ಶೌಚಾಲಯ ಸಮಸ್ಯೆ ಬಗೆಹರಿಸಬೇಕು’ ಎಂದು ವಿದ್ಯಾರ್ಥಿನಿ ಗಂಗಮ್ಮ ಬಸಾಪುರ ಒತ್ತಾಯಿಸಿದರು.

‘ಮಕ್ಕಳು ಬಯಲಿಗೆ ಶೌಚಾಲಯಕ್ಕೆ ಹೋದಾಗ ಪಡ್ಡೆ ಹುಡುಗ ರಕಾಟ ಹೆಚ್ಚಾಗಿದೆ. ಈ ಬಗ್ಗೆ ಸ್ಥಳೀಯ ಮುಖಂಡರಿಗೂ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮೇಲ್ವಿಚಾರಕಿ ರೇಣುಕಾ ಹೇಳಿದರು.

ಸಮರ್ಪಕ ನೀರು ಪೂರೈಕೆ, ವಸತಿ ನಿಲಯದ ಸುತ್ತ ಮುತ್ತ ಇರುವ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಉತ್ತಮ ವಾತಾವರಣ ನಿರ್ಮಿಸಬೇಕು. ಕೊಳಚೆ ನೀರು ಸಂಗ್ರಹಗೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.