ADVERTISEMENT

ಅಹಿಂಸಾ ಮೂರ್ತಿಗೆ ಭಕ್ತಿಯ ನಮನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:35 IST
Last Updated 3 ಅಕ್ಟೋಬರ್ 2011, 8:35 IST

ಕೊಪ್ಪಳ: ಅಹಿಂಸಾ ಮೂರ್ತಿ ಹಾಗೂ ಸತ್ಯ ಪ್ರತಿಪಾದಕ ಎಂದೇ ಖ್ಯಾತಿ ಹೊಂದಿರುವ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ನಗರದ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪೂಜೆ ನೆರೆವೇರಿಸಿ, ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಕಚೇರಿ: ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ ಮಾತನಾಡಿದರು. ಮುಖಂಡರಾದ ಮರ್ದಾನಲಿ ಸಾಬ ಅಡ್ಡೇವಾಲೆ, ಜುಲ್ಲು ಖಾದರ್ ಖಾದ್ರಿ, ಗವಿಸಿದ್ದಪ್ಪ ಮುದಗಲ್ ಮತ್ತಿತರರು ಪಾಲ್ಗೊಂಡಿದ್ದರು ಎಂದು ವಕ್ತಾರ ಅಕ್ಬರ್ ಪಾಷಾ ಪಲ್ಟನ್ ತಿಳಿಸಿದ್ದಾರೆ.

ಯಶಸ್ವಿ ಸೇವಾ ಸಂಸ್ಥೆ:  ನಗರದ ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಆಶ್ರಯದಲ್ಲಿ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಕುಮಾರ ಬೋಂದಾಡೆ, ಶಿವಕುಮಾರ ಸೊಂಡೂರು, ಶ್ರೀಶೈಲ ಕುದರಿಮೋತಿ ಮತ್ತಿತರರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ಪರಶುರಾಮ ಮ್ಯಾಳಿ ಅಧ್ಯಕ್ಷತೆ ವಹಿಸಿದ್ದರು.

ಅನ್ನಪೂರ್ಣ ಪ್ರಾರ್ಥನಾ ಗೀತೆ ಹಾಡಿದರು. ವಿಶಾಲಾಕ್ಷಿ ಡೋಣಿ ನಿರೂಪಿಸಿದರು ಹಾಗೂ ನೈನಾಜ್ ಹೊಸಮನಿ ವಂದಿಸಿದರು.

ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ: ಉಪನ್ಯಾಸಕ ಎಸ್.ಎನ್.ಚನ್ನನಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಆರ್.ಬಿ.ಗಾಂಜಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಎ.ಎನ್.ತಳಕಲ್, ರೇಣುಕಾ ಅಳ್ಳಿ, ಎ.ಎಸ್.ದೇಸಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಕ್ಷ್ಮೀ ಜೋಡಿದಾರ ಪ್ರಾರ್ಥನಾ ಗೀತೆ ಹಾಡಿದರು.

ಮೇಘನಾ ಸ್ವಾಗತಿಸಿದರು. ಪ್ರಹ್ಲಾದ್ ನಿರೂಪಣೆ ಹಾಗೂ ಶಿವಶಂಕ್ರಪ್ಪ ವಂದನಾರ್ಪಣೆ ನೆರವೇರಿಸಿದರು.
ಭಾರತ ಸೇವಾ ದಲ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಭಾರತ ಸೇವಾ ದಲ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವ ಧರ್ಮ ಪ್ರಾರ್ಥನಾ ಗೀತೆಗಳನ್ನು ಹಾಡಲಾಯಿತು.

ದಲದ ಜಿಲ್ಲಾ ಕಾರ್ಯದರ್ಶಿ ದ್ಯಾಮಣ್ಣ ಚಿಲವಾಡಗಿ, ಜಿಲ್ಲಾ ಸಮಿತಿ ಸದಸ್ಯೆ ಇಂದಿರಾ ಭಾವಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್, ಜಿಲ್ಲಾ ಸಮಿತಿ ಸದಸ್ಯ ಸೋಮಶೇಖರ ಹರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಸುದರ್ಶನರಾವ್, ತಾಲ್ಲೂಕು ಕಾರ್ಯದರ್ಶಿ ಶಿವಾನಂದ ಹೊದ್ಲೂರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಿ.ಎಸ್.ಜಿ.ಎಸ್.ಟ್ರಸ್ಟ್: ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸುರೇಶ ಸೊನ್ನದ ಉಪನ್ಯಾಸ ನೀಡಿದರು. ಇನ್ನೋರ್ವ ಉಪನ್ಯಾಸಕ ಇಬ್ರಾಹಿಂ ಕುದರಿಮೋತಿ, ಪಾಲಕ ಹೊನಕೇರಪ್ಪ, ಸಂಸ್ಥೆಯ ಸಹಕಾರ್ಯದರ್ಶಿ ಖಾಜಾವಳಿ ಕುದರಿಮೋತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರು ಅಧ್ಯಕ್ಷತೆ ವಹಿಸಿದ್ದರು.
 ಮುಖ್ಯ ಶಿಕ್ಷಕ ಸುರೇಶ ಕಿನ್ನಾಳ, ರೂಪಾ ಉತ್ತಂಗಿ ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಚಲವಾದಿ ನಿರೂಪಣೆ, ಗೀತಾ ಯಕ್ಲಾಸಪೂರ ಸ್ವಾಗತ ಹಾಗೂ ಸಂಗಮ್ಮ ಹಿರೇಮಠ ವಂದನಾರ್ಪಣೆ ನೆರವೇರಿಸಿದರು.

ವಿದ್ಯಾಮಂದಿರ: ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಅಡಳಿತ ಮಂಡಳಿ ಕಾರ್ಯದರ್ಶಿ ಆರ್.ಎಚ್.ಅತ್ತನೂರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ನಾಗರಿಕ ಹಂಪಣ್ಣ ಅವರು ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆಶಾ ದೊಡ್ಡಮನಿ ನಿರೂಪಣೆ, ಅನಿತಾ ಸ್ವಾಗತ ಹಾಗೂ ಆಫ್ರೀನ್ ಬಾನು ವಂದನಾರ್ಪಣೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.