ADVERTISEMENT

ಆರೋಗ್ಯ ಸೇವೆಗೆ ಸಮುದಾಯದ ಪಾತ್ರ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:40 IST
Last Updated 19 ಮಾರ್ಚ್ 2012, 6:40 IST

ಕಾರಟಗಿ: ರಾಜ್ಯದಲ್ಲಿ 8,568 ಆರೋಗ್ಯ ಉಪ ಕೇಂದ್ರ, 2194 ಪ್ರಾಥಮಿಕ ಆರೋಗ್ಯ ಕೇಂದ್ರ, 180 ಸಮುದಾಯ ಆರೋಗ್ಯ ಕೇಂದ್ರ, 27 ಜಿಲ್ಲಾ ಆಸ್ಪತ್ರೆ, 10 ವೈದ್ಯಕೀಯ ಕಾಲೇಜ್, 60 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದರೂ ಜನರಿಗೆ ಸಮರ್ಪಕವಾದ ಆರೋಗ್ಯ ಸೇವೆ ದೊರೆಯುತ್ತಿಲ್ಲ.

ಸಮುದಾಯವು ಆರೋಗ್ಯ ಸೇವೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡರೆ ಮಾತ್ರ ಎಲ್ಲರಿಗೂ ಆರೋಗ್ಯ ಸೇವೆ ದೊರೆಯಲು ಸಾಧ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮಲ್ಲೇಶ್ ಎಚ್. ಹೇಳಿದರು.

ಶನಿವಾರ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಸಮುದಾಯ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸಲು, ಮುಕ್ತನಿಧಿಯ ಸದ್ಬಳಕೆ, ಸರ್ಕಾರದ ಯೋಜನೆಗಳ ಜಾರಿ ಸೇರಿದಂತೆ ವಿವಿಧ ವಿಷಯಗಳ ಬಗೆಗೆ ಮುಕ್ತವಾಗಿ ಮಾತನಾಡಲು, ಸಮುದಾಯಕ್ಕೆ ಮಾಹಿತಿ ದೊರೆಯಲು ಸಮುದಾಯ ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ ಉತ್ತಮ ಆರೋಗ್ಯ ಸೇವೆದೊರಕಿಸಲು ಸಿಬ್ಬಂದಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಡಾ. ಕೆ. ವೀರಣ್ಣ ಉಪ್ಪಳ ಗರ್ಭಿಣಿಯರ ಆರೈಕೆ ಕುರಿತು, ಹಾರೋನ್ ಖುರೇಶಿ ಮಲೇರಿಯಾ ಕುರಿತು, ಜಿ. ಗೌರಮ್ಮ ತಾಯಿ ಹಾಗೂ ಮಗುವಿನ ಸುರಕ್ಷತೆ ಕುರಿತು, ಜಿ. ಹಂಪಣ್ಣ ಕುಷ್ಟರೋಗ ಬಗೆಗೆ, ಶಾಂತಾ ರಾಯನಗೌಡ್ರ ಚಿಕ್ಕಮಕ್ಕಳ 7 ಮಾರಕ ರೋಗ ಹಾಗೂ ಅದರ ನಿರೋಧಕ ಲಸಿಕೆ ಕುರಿತು ಮಾತನಾಡಿದರು.

ಹಿರಿಯ ಆರೋಗ್ಯ ಸಹಾಯಕ ಎನ್.ಕೆ. ಎತ್ತಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರಿಗೂ ಮುಕ್ತವಾಗಿ ಆರೋಗ್ಯ ಸೇವೆ ದೊರೆಯಲು ಎಲ್ಲರೂ ಸೇರಿ ಮುಕ್ತವಾಗಿ ಚರ್ಚೆ ನಡೆಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸರ್ವರೂ ಆರೋಗ್ಯ ಸೇವೆ ಪಡೆಯಲು, ಇನ್ನೊಬ್ಬರಿಗೆ ತಲುಪಿಸಲು ಸಂಕಲ್ಪ ಮಾಡಬೇಕು ಎಂದರಲ್ಲದೇ ದಿನಾಚರಣೆಯ ಘೋಷಣೆಯ ಬಗ್ಗೆ ಮಾತನಾಡಿದರು..

ಗ್ರಾಪಂ ಅಧ್ಯಕ್ಷೆ ಸೋನುಬಾಯಿ ಸಿಂಘಿ ್ರ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಸದಸ್ಯೆ ಟಿ. ಗಂಗಮ್ಮ, ಡಾ. ಕಾವೇರಿ ಶ್ಯಾವಿ, ಶಿಕ್ಷಕಿ ಸುಜಾತಾ, ಬಸವಣ್ಣೆಯ್ಯ, ಸಿ. ಮಂಜುನಾಥ, ವಿ. ಎಸ್. ಸೋಮಾಪೂರ, ಜ್ಯೋತಿ, ಶರಣಪ್ಪ, ಅನಂತ, ಜ್ಯೋತಿ, ಜಯಶ್ರೀ, ಉಮಾಶ್ರೀ, ಭಾಗ್ಯಶ್ರೀ, ಎಲ್ಲಪ್ಪ ಮೊದಲಾದವರು ಉಪಸ್ಥಿತರಿದ್ದರು.

ಶಶಿಕಲಾ ಶಹಾಪೂರ ಪ್ರಾರ್ಥಿಸಿದರು. ಎತ್ತಿನಮನಿ ಕಾರ್ಯಕ್ರಮ ನಿರ್ವಹಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.