ಯಲಬುರ್ಗಾ: ತಾಲ್ಲೂಕಿನ ತರಲಕಟ್ಟಿ, ಹಿರೇಅರಳಿಹಳ್ಳಿ, ಮಾಟಲದಿನ್ನಿ ಹಾಗೂ ಹಿರೇವಂಕಲಕುಂಟಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಇದರಿಂದ ತೋಟಗಾರಿಕೆ ಬೆಳೆಗಾರರು ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುವಂತಾಗಿದೆ. ಕಾರಣ ಸರ್ಕಾರ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಒತ್ತಾಯಿಸಿದರು.
ಗುರುವಾರ ತರಲಕಟ್ಟಿ ಹಾಗೂ ಇನ್ನಿತರ ಗ್ರಾಮಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಲಂಗಡಿ, ಮಾವು, ದ್ರಾಕ್ಷಿ, ಮೆಣಸಿನಕಾಯಿ, ಸಪೋಟ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳು ಆಲಿಕಲ್ಲಿನ ಹೊಡೆತಕ್ಕೆ ನಷ್ಟವಾಗಿದೆ. ಸಾಲಸೋಲ ಮಾಡಿ ತೋಟಗಾರಿಕೆ ಬೆಳೆಯನ್ನು ಅಭಿವೃದ್ಧಿ ಪಡಿಸಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ದಿಕ್ಸೂಚಿ: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ದೊರೆಯುವುದರ ದಿಕ್ಸೂಚಿಯಾಗಿದೆ. ಎರಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ವಿದ್ದರೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಜನತೆಗೆ ಬೇಸರ ತಂದಿರುವುದು ಗೊತ್ತಾಗುತ್ತಿದೆ. ಕೇವಲ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ ಕಾಂಗ್ರೆಸ್ ಜನರ ಕಲ್ಯಾಣಕ್ಕೆ ಯಾವತ್ತು ಶ್ರಮಿಸುತ್ತಿಲ್ಲ. ವರ್ಷ ಕಳೆಯುತ್ತಾ ಬಂದರೂ ಹೇಳಿಕೊಳ್ಳುವ ಯಾವೊಂದು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಜನವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರಿಂದಲೇ ರಾಜ್ಯದ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೊಪ್ಪಳ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವರಿಷ್ಠರು ಅಭ್ಯರ್ಥಿಯನ್ನಾಗಿ ಯಾರನ್ನೇ ಅಂತಿಮಗೊಳಿಸಿದರೂ ಅವರ ಗೆಲುವಿಗೆ ಹಗಲಿರುಳು ಶ್ರಮಿಸುವುದು ಕ್ಷೇತ್ರದ ಕಾರ್ಯಕರ್ತರ ಹಾಗೂ ಮುಖಂಡರ ಕರ್ತವ್ಯವಾಗಿದೆ. ಅಲ್ಲದೇ ಸಮರ್ಥ ರೀತಿಯಲ್ಲಿ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಶೀಘ್ರದಲ್ಲಿಯೇ ಮನೆ ಮನೆಗೆ ಬಿಜೆಪಿ ಎಂಬ ವಿಶೇಷ ಕಾರ್ಯಕ್ರಮವನ್ನು ಪಕ್ಷವು ಆಯೋಜಿಸಲಿದ್ದು, ಇದರ ಅಡಿಯಲ್ಲಿ ಪಕ್ಷವನ್ನು ಕೆಳಹಂತದಿಂದ ಸಂಘಟಿಸುತ್ತಾ ಪಕ್ಷದ ಧೋರಣೆ, ಅಭಿವೃದ್ಧಿಯ ಕಾರ್ಯಕ್ರಮಗಳು ಹಾಗೂ ನರೇಂದ್ರ ಮೋದಿಯರವರ ವ್ಯಕ್ತಿತ್ವದ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಲಾಗುವುದು ಎಂದರು.
ಬಿಎಸ್‌ಆರ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರುವುದರಲ್ಲಿ ಯಾವುದೇ ಆಶ್ಚರ್ಯ ಪಡಬೇಕಿಲ್ಲ, ಅವರು ಬಿಜೆಪಿ ಪಕ್ಷದವರೇ ಯಾವುದೋ ಕಾರಣದಿಂದ ಬೇರೆ ಪಕ್ಷದಲ್ಲಿದ್ದರು. ಈಗ ಮರಳಿ ಪಕ್ಷಕ್ಕೆ ಸೇರುತ್ತಿರುವುದರಿಂದ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ಬಿಜೆಪಿಮಯ ವಾತಾವರಣ ಮತ್ತೆ ಮರುಕಳಿಸಲಿದೆ ಎಂದು ಆಚಾರ್ ನುಡಿದರು.
ಪ್ರಭುರಾಜ ಕಲಬುರ್ಗಿ, ಸಿದ್ದರಾಮೇಶ ಬೇಲೇರಿ, ವೀರಣ್ಣ ಹುಬ್ಬಳ್ಳಿ, ಸುರೇಶಗೌಡ, ಸಿದ್ದಪ್ಪ ಕಟ್ಟೀಮನಿ, ಶಂಕರಪ್ಪ ಪಲೋಟಿ, ಮುನಿಯಪ್ಪ ಹುಬ್ಬಳ್ಳಿ, ಸಿದ್ದಪ್ಪ ಹಕ್ಕಿಗುಣಿ, ಅಮರೇಶ ಹುಬ್ಬಳ್ಳಿ, ಷಣ್ಮುಖಪ್ಪ ರಾಂಪೂರ, ನಟರಾಜ ಬಿದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.